

ತೀರ್ಥಹಳ್ಳಿ: ಸಾಕ್ಷರತೆ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ನೈತಿಕವಾಗಿ ಸರಿದಾರಿಯಲ್ಲಿ ನಡೆಯುವಂತೆ ಯುವಜನರನ್ನು ಎಚ್ಚರಿಸುವ ಅಗತ್ಯವಿದೆ ಎಂದು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ಬೆಟ್ಟಮಕ್ಕಿ ಬಡಾವಣೆಯಲ್ಲಿ ಗುರುವಾರ ಆಯೋಜಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ-ಸಂಭ್ರಮದ ಸಾಂಸ್ಕೃತಿಕ ಸಂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಾಂಧತೆ, ಭ್ರಷ್ಟಾಚಾರ ಮುಂತಾದ ಸಮಾಜಕ್ಕೆ ಮಾರಕವಾಗಿರುವ ಬೆಳವಣಿಗೆ ವಿದ್ಯಾವಂತರಿಂದಲೇ ನಡೆಯುತ್ತಿದೆ. ಈ ಕುರಿತು ಶಿಕ್ಷಣ ಸಂಸ್ಥೆಗಳು ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರು ಮಾತ್ರವಲ್ಲದೆ ಪಾಲಕರು ಸಹ ಮಕ್ಕಳಿಗೆ ಹಿತವಚನ ಹೇಳಬೇಕು. ಅವರ ನಡೆ-ನುಡಿ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ. ಮಕ್ಕಳ ಪರಿಶುದ್ಧ ಮನಸ್ಸನ್ನು ಕೆಡಿಸದಂತೆ ಜಾತಿ, ಮತ ಭೇದವಿಲ್ಲದೆ ಹೃದಯವನ್ನು ಜೋಡಿಸುವ ಶಿಕ್ಷಣದ ಅಗತ್ಯವಿದೆ. ಮಕ್ಕಳಿಗೆ ಹಿರಿಯರಾದ ನಾವುಗಳೇ ಮಾದರಿಯಾಗಬೇಕು ಎಂದು ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಮಾತನಾಡಿ, ಕಳೆದ 35 ವರ್ಷಗಳಿಂದ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಮೆರೆದಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಜಾತಿ, ಮತ ಭೇದವಿಲ್ಲದೆ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಕಲಾ ಪ್ರದರ್ಶನ: ನಾಲ್ಕು ತಾಸುಗಳ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಶಾಲೆ ವಿದ್ಯಾರ್ಥಿಗಳು ಭಾರತೀಯ ಸಾಂಸ್ಕೃತಿಕ ಕಲಾ ಪ್ರಕಾರಗಳಾದ ಕೂಚುಪುಡಿ, ಮೋಹಿನಿಯಾಟ್ಟಂ, ಕಲರಿಯಪಟ್ಟು ಸಾಹಸ ಕಲೆ, ಒಡಿಶಿ, ಬಂಜಾರ ನೃತ್ಯಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ, ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಪಂಡರಿನಾಥ್, ಜಿ.ಎನ್.ಪ್ರಕಾಶ್, ಪ್ರಾಚಾರ್ಯರಾದ ಎಚ್.ಜಿ.ಗುರುರಾಜ್, ಆಗ್ನೆಸ್ ಮೆಂಡೋನ್ಸಾ, ಸಂಘದ ಉಪಾಧ್ಯಕ್ಷ ಚಂದವಳ್ಳಿ ಸೋಮಶೇಖರ್, ಸಹಕಾರ್ಯದರ್ಶಿ ಧನ್ಯಾ ಅಶ್ವಲ್ ಇದ್ದರು.