ಸಿಇಟಿ ಮಾಹಿತಿ, ಸಮಸ್ಯೆ ಪರಿಹಾರಕ್ಕೆ ಕೆಇಎ ತ್ರಿಸೂತ್ರ: ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್, ಚಾಟ್‌ಬಾಟ್‌ಗೆ ಚಾಲನೆ

Mobile app
Published on

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ, ಸೀಟು ಹಂಚಿಕೆ ಮತ್ತು ಕಾಲೇಜು ಪ್ರವೇಶದ ಸಂದರ್ಭದಲ್ಲಿ ಎದುರಾಗುವಂತಹ ತಾಂತ್ರಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿದ್ಯಾರ್ಥಿ ಸ್ನೇಹಿಯಾಗಿ ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಚಾಟ್‌ಬಾಟ್ ಎಂಬ ಮೂರು ಹೊಸ ಉಪಕ್ರಮಗಳನ್ನು ಜಾರಿಗೊಳಿಸಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಮೊಬೈಲ್‌ನಲ್ಲೇ ಸಂಪೂರ್ಣ ಮಾಹಿತಿ ಸಿಗಲಿದೆ. ಕಂದು-ಕೊರತೆಗಳ ಬಗ್ಗೆಯೂ ಮೊಬೈಲ್ ಆ್ಯಪ್ ಮೂಲಕವೇ ದೂರು ದಾಖಲಿಸಬಹುದು. ಈ ಹೊಸ ವಿದ್ಯಾರ್ಥಿ ಸ್ನೇಹಿ ಉಪಕ್ರಮಗಳಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸೋಮವಾರ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಡಾ. ಎಂ.ಸಿ. ಸುಧಾಕರ್, ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಅಭ್ಯರ್ಥಿಸ್ನೇಹಿಯಾಗಿಸಲು ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಪರೀಕ್ಷಾ ಪ್ರಾಧಿಕಾರ ಸದಾ ಮುಂದಿದೆ. ಇದರ ಪರಿಣಾಮವಾಗಿ ನಿಖರವಾದ ಸಮಯದಲ್ಲಿ ಖಚಿತವಾದ ಮಾಹಿತಿ ಲಭ್ಯವಾಗುತ್ತದೆ. ಅನಗತ್ಯ ಗೊಂದಲಕ್ಕೆ ತೆರೆ ಬೀಳುತ್ತದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪುತ್ತದೆ ಎಂದರು.

ಕಾಲೇಜು ಪೋರ್ಟಲ್ ಉಪಯೋಗವೇನು?

- ಅಭ್ಯರ್ಥಿಗಳು ಆಪ್ಷನ್ ದಾಖಲಿಸುವುದಕ್ಕೂ ಮುನ್ನ ಕಾಲೇಜುಗಳ ಸಂಪೂರ್ಣ ಮಾಹಿತಿ ಒಂದೇ ಪೋರ್ಟಲ್‌ನಲ್ಲಿ ಲಭ್ಯ

- ಕೆಇಎನಲ್ಲಿ ಕಾಲೇಜಿನ ಪೋರ್ಟಲ್ ಲಿಂಕ್ ದೊರೆಯಲಿದ್ದು, ಕಾಲೇಜುಗಳಲ್ಲಿನ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ, ಕೊಠಡಿ, ಹಾಸ್ಟೆಲ್, ಕೋರ್ಸ್‌ವಾರು ಶುಲ್ಕದ ವಿವರ, ಸಿಬ್ಬಂದಿಯ ಮಾಹಿತಿ

- ಸಾವಿರಾರು ವಿದ್ಯಾರ್ಥಿಗಳಿಗೆ ಕಾಲೇಜಿನ ಮಾಹಿತಿ ಇಲ್ಲದೆ, ಸೀಟು ಪಡೆದು ಕೊನೇ ಕ್ಷಣದಲ್ಲಿ ಕಾಲೇಜು ಬದಲಾಯಿಸುವಂತೆ ದುಂಬಾಲು ಬೀಳುವ ಪ್ರಕರಣಗಳು ತಪ್ಪಲಿವೆ

- ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ದಾಖಲಿಸುವುದಕ್ಕೂ ಇದೇ ಪೋರ್ಟಲ್‌ನಲ್ಲಿ ಲಿಂಕ್ ಇದೆ

ಕೆಇಎ ಮೊಬೈಲ್ ಆ್ಯಪ್

- ಕೆಇಎ ನಡೆಸುವ ಎಲ್ಲ ರೀತಿಯ ಪ್ರವೇಶ ಪರೀಕ್ಷೆಗಳ ಮಾಹಿತಿ ನೋಟಿಫಿಕೇಷನ್ ಸಿಗಲಿದೆ

- ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವ ಕ್ಯೂಆರ್ ಕೋಡ್ ಮೂಲಕ ಆೃಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸದ್ಯ ಪ್ಲೇ ಸ್ಟೋರ್‌ನಲ್ಲಿ ಹಾಗೂ ಐಒಎಸ್ ತಂತ್ರಜ್ಞಾನದಲ್ಲಿ ಇದು ಲಭ್ಯವಾಗಿಲ್ಲ

- ಸಿಇಟಿಯ ಕ್ಷಣ ಕ್ಷಣದ ಮಾಹಿತಿ ಸಿಗಲಿದೆ. ಆಪ್ಷನ್ ದಾಖಲಿಸುವುದು, ಛಾಯ್ಸ್ ಆಯ್ಕೆ, ಶುಲ್ಕ ಪಾವತಿ ಸೇರಿ ಎಲ್ಲ ಪ್ರಕ್ರಿಯೆಗಳ ನೋಟಿಫಿಕೇಷನ್

ಏನಿದು ಕೆಇಎ ಚಾಟ್‌ಬಾಟ್?

- ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಚಾಟ್‌ಬಾಟ್ ಇದಾಗಿದೆ. ಇದನ್ನು ಬಿಎಸ್‌ಎನ್‌ಎಲ್ ಸಹಯೋಗದೊಂದಿಗೆ ರೂಪಿಸಲಾಗಿದೆ.

- ಈಗಾಗಲೇ 1.35 ಲಕ್ಷ ಅಭ್ಯರ್ಥಿಗಳಿಗೆ ಚಾಟ್‌ಬಾಟ್‌ನಲ್ಲಿ ಮಾಹಿತಿ ನೀಡಲಾಗಿದೆ

- ಅಭ್ಯರ್ಥಿಗಳು ತಾವು ಏನನ್ನು ಕೇಳಬೇಕೋ ಅದನ್ನು ಟೈಪ್ ಮಾಡಿ ಸೆಂಡ್ ಮಾಡಿದರೆ ಚಾಟ್ ಬಾಟ್ ಉತ್ತರ ನೀಡುತ್ತದೆ

- ಸದ್ಯ ಇಂಗ್ಲೀಷ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿಯೂ ಲಭ್ಯವಾಗುವಂತೆ ಅಪ್‌ಗ್ರೇಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net