

ಕೋಲಾರ: ಜನಪ್ರತಿನಿಧಿಗಳಿಂದ ಜಿಲ್ಲೆಯ ಸಮಸ್ಯೆಗಳ ಅನಾವರಣ, ಸಂಸದ ಮುನಿಸ್ವಾಮಿಗೆ ಮಾತನಾಡಲು ಅವಕಾಶ ನಿರಾಕರಣೆ, ಮಾತು ಮುಗಿಸಿ ನಿರ್ಗಮಿಸಿದ ಶಾಸಕರು, ಸಭಾಂಗಣದಲ್ಲಿ ಹಾಜರಾತಿಯ ಕರಾಮತ್ತು ಇವು ಎಂಟು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಡಿಪಿ ಸಭೆಯ ಮುಖ್ಯಾಂಶಗಳು.
ಸಭೆಯಲ್ಲಿ ಆರೋಗ್ಯ ಇಲಾಖೆ ಬಗ್ಗೆ ಚರ್ಚೆಗೆ ಸಚಿವರು ಮುನ್ನುಡಿ ಹೇಳುತ್ತಿದ್ದಂತೆ ಮೈಕೊಡವಿಕೊಂಡು ಮಾತನಾಡಲಾರಂಭಿಸಿದ ಜಿಲ್ಲೆಯ ಹಿರಿಯ ಶಾಸಕ ಕೆ.ಆರ್.ರಮೇಶ್ ಕುಮಾರ್, ಬಡವರ ಅನುಕೂಲಕ್ಕಾಗಿ ನಗರದಲ್ಲಿ ಕಟ್ಟಿರುವ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ಈವರೆಗೆ ಬಂದಿರುವ ಸರ್ಕಾರಗಳು ಸಾಕಷ್ಟು ಸಹಕಾರ ನೀಡಿವೆ, ಆದರೆ ಅಲ್ಲಿನ ದುರಾಡಳಿತದಿಂದ ರೋಗಿಗಳು ಪರಿತಪಿಸುವಂತಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಎಸ್ಸೆನ್ನಾರ್ ಆಸ್ಪತ್ರೆ ಹೆಸರನ್ನು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಡಿಕೊಳ್ಳುವುದು ಸೂಕ್ತ. ನಿಮ್ಮಿಂದ ಯಾರಿಗಾದರೂ ಪ್ರಯೋಜನ ಆಗುತ್ತಿದೆಯಾ? ಹೆರಿಗೆಗೆ ಬಂದರೂ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡ್ತೀರಾ? ನಾವು ಶ್ರಮಪಟ್ಟು ಆಸ್ಪತ್ರೆ ಅಭಿವೃದ್ಧಿ ಪಡಿಸಿದ್ದೇವೆ, ಆದರೆ ತಾವು ನಾಶ ಮಾಡಲು ಹೊರಟಿದ್ದೀರಿ, ಆಕಸ್ಮಿಕವಾಗಿ ಯಾರಾದರೂ ಮೃತಪಟ್ಟರೆ, ಸಂಬಂಧಿಕರಿಗೆ ಮೃತದೇಹ ಕೊಡುವುದಕ್ಕೆ ನಮ್ಮ ರೆಕಮೆಂಡೇಷನ್ ಬೇಕಾ, ಹೆಣ್ಣು ಮಕ್ಕಳು ಹೆರಿಗೆ ಮಾಡಿಸಿಕೊಳ್ಳಲು ನಮ್ಮ ಶಿಫಾರಸು ಬೇಕಾ ಎಂದು ಡಿಎಚ್ಒ ಡಾ.ಜಗದೀಶ್ ಮತ್ತು ಜಿಲ್ಲಾ ಸರ್ಜನ್ ಡಾ.ವಿಜಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಶ್ರೀ ವರದಿ ನೀಡಿ: ಪ್ರಕೃತಿಯ ವಿಕೋಪದಿಂದ ಬೆಳೆ ನಾಶವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ, ಕೃಷಿ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, 24 ಗಂಟೆಯೊಳಗೆ ಬೆಳೆ ನಾಶಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ಒದಗಿಸಿ ಎಂದು ಸಚಿವರ ಗಮನಕ್ಕೆ ತಂದರು.
ಮೇಜರ್ ಸರ್ಜರಿ ಅಗತ್ಯ: ಶಿಕ್ಷಣ ಇಲಾಖೆಗೆ ಮೇಜರ್ ಸರ್ಜರಿ ಆಗಬೇಕಿದೆ. ಸರ್ಕಾರಿ ಶಾಲೆಗಳನ್ನು ಪುಂಡ ಪೋಕರಿಗಳು ಬಾರ್ಗಳನ್ನಾಗಿ ಮಾಡಿಕೊಂಡಿದ್ದಾರೆ, ಶಿಕ್ಷಕರು ಅಸಹಾಯಕರಾಗಿದ್ದಾರೆ, ಸರ್ಕಾರ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದಿರುವುದರಿಂದ ಬಡ ಮಕ್ಕಳು ಖಾಸಗಿ ಶಾಲೆಗೆ ಸೇರಿ ಮಮ್ಮಿ, ಡ್ಯಾಡಿ ಸಂಸತಿ ಕಲಿತು ಕನ್ನಡ ಮರೆಯುವಂತಾಗಿದೆ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಕನ್ನಡ ಕಲಿಕೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಕ್ರಮ ಸಕ್ರಮಗೊಳಿಸಿ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಇತ್ತೀಚೆಗೆ ೇತ್ರದಲ್ಲಿ ಕಲ್ಲು ಕುಟುಕರ ಸಭೆ ನಡೆಸಿದ್ದು ಸ್ವಾಗತಾರ್ಹ. ಆದರೆ ಡಿಸಿ, ಎಸ್ಪಿ ಹಾಗೂ ಸಂಸದರನ್ನು ಜತೆಗಿಟ್ಟುಕೊಂಡು ಸಭೆ ಮಾಡಿದ ತಮಗೆ ಮಾಲೂರು ೇತ್ರದ ಶಾಸಕನಾಗಿರುವ ನನ್ನನ್ನು ಸಭೆಗೆ ಕರೆಯಲು ನೆನಪು ಆಗಲಿಲ್ಲವೇ ಎಂದು ಸಚಿವರನ್ನು ಕುಟುಕಿದರು. ಕಲ್ಲು ಕುಟುಕರ ಪರವಾಗಿ ನಡೆಸಿದ ಸಭೆ ಬಿಜೆಪಿ ಸಭೆಯಾಗಿತ್ತು, ಅಲ್ಲಿ ತಾವು ಕಲ್ಲುಕುಟುಕರ ಬಗ್ಗೆ ತೋರಿದ ಕಾಳಜಿ ಸ್ಥಳಿಯ ಕಲ್ಲುಕುಟುಕರ ಭವಿಷ್ಯಕ್ಕೆ ಮಾರಕವಾಗಿತ್ತು, ವಿಧಾನಸಭೆಯ ಅಧಿವೇಶನದಲ್ಲಿ ನಾನು ಸ್ಥಳಿಯ ಕಲ್ಲು ಕುಟುಕರನ್ನು ಮುಂದುವರಿಸಲು ಅಕ್ರಮ ಸಕ್ರಮಗೊಳಿಸುವಂತೆ ತಿಳಿಸಿದ್ದೇನೆ. ಈಗಲೂ ಅದನ್ನೇ ಪ್ರತಿಪಾದಿಸುತ್ತಿದ್ದೇನೆ ಎಂದರು.
ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ಸಭೆಯ ಅಜೆಂಡಾದಲ್ಲಿ ನೀರಾವರಿ ಇಲಾಖೆಯ ವಿಚಾರ ಕೈಬಿಡಲಾಗಿದೆ. ಎತ್ತಿನಹೊಳೆ, ಯರಗೋಳ್ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು , ಟೊಮ್ಯಾಟೋ ಬೆಳೆಯುತ್ತಿದ್ದು ಸಂಸ್ಕರಣಾ ಟಕವನ್ನು ತಕ್ಷಣ ಮಂಜೂರು ಮಾಡಿಸಿ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ಕೆಡಿಪಿ ಸಭೆ ವಿಳಂಬಕ್ಕೆ ಆಕ್ರೋಶ:ಕೆಡಿಪಿ ಸಭೆ ಪ್ರತಿ 3 ತಿಂಗಳಿಗೊಮ್ಮೆ ನಡೆಯಬೇಕು 8 ತಿಂಗಳ ಬಳಿಕ ಸಭೆ ನಡೆಯುತ್ತಿದೆ. ಇದಕ್ಕೆ ಕಾರಣವೇನು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೇಳಿದಾಗ, ಸಚಿವರು ಗೊಂದಲ ಸೃಷ್ಟಿಸಬೇಡಿ, ಕರೊನಾ ಇನ್ನಿತರ ಕಾರಣಗಳಿಂದ ಸಭೆ ವಿಳಂಬವಾಗಿದೆ, ಇನ್ನು ಮುಂದೆ ತಿಂಗಳಿಗೊಮ್ಮೆ ಸಭೆ ಮಾಡುವೆ ಎಂದಾಗ, ಇದರಲ್ಲಿ ಗೊಂದಲ ಏನಿದೆ, ಸಭೆ ಏಕೆ ವಿಳಂಬವಾಯಿತು ಎಂದು ಕೇಳಿದ್ದು ತಪ್ಪೇ ಎಂದಾಗ, ರಮೇಶ್ ಕುಮಾರ್ ಮಧ್ಯ ಪ್ರವೇಶಿಸಿ ಸಚಿವ & ನಾರಾಯಣಸ್ವಾಮಿ ಜುಗಲ್ ಬಂದಿಗೆ ತೆರೆ ಎಳೆದರು.
ಸಭೆಗೆ ತಡವಾಗಿ ಆಗಮಿಸಿದ ಸಂಸದ ಮುನಿಸ್ವಾಮಿ ಶಾಸಕರ ಪ್ರಶ್ನೆಗಳ ನಡುವೆ ಮಾತನಾಡಲು ಮುಂದಾದಾಗ ಸಚಿವರು ತಡೆದರು. ಅವರು ತಮ್ಮ ಸರದಿ ಬರುವ ಮುನ್ನವೇ ಸಭೆಯಿಂದ ನಿರ್ಗಮಿಸಿದರು, ಅನೇಕ ಶಾಸಕರು ತಮ್ಮ ಮಾತು ಮುಗಿದ ಬಳಿಕ ಸಭೆಯಿಂದ ನಿರ್ಗಮಿಸಿದರು. ಸಂಜೆ 5 ಗಂಟೆವರೆಗೂ ಸಭೆ ನಡೆಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮುಂದಿನ ಸಭೆಯಲ್ಲಿ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿಯಲ್ಲೂ ಲೂಟಿ: ಅಂಗನವಾಡಿ ಕೇಂದ್ರಗಳಲ್ಲಿ ಬಡ ಮಕ್ಕಳಿಗೆ ಊಟ ಕೊಡುವ ಬದಲು ಅಧಿಕಾರಿಗಳು ಹೊಟ್ಟೆಗಳನ್ನು ತುಂಬಿಸಿಕೊಂಡು ಹಣ ಲೂಟಿ ಹೊಡೆಯುತ್ತಿದ್ದಾರೆ. ಅನೇಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲ ಎಂದು ಜನಪ್ರತಿನಿಧಿಗಳು ದೂರಿದರು.
ಸುಧಾರಣೆ ತನ್ನಿ: ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯು ಕೋಲಾರ ನಗರಕ್ಕೆ ಲ್ಯಾಂಡ್ಮಾರ್ಕ್ ಇದ್ದಂತೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮಾದರಿಯಲ್ಲಿರುವ ಇದನ್ನು ಉಳಿಸುವ ಕೆಲಸ ಮಾಡಬೇಕೇ ಹೊರತು ಹಣಕ್ಕಾಗಿ ಖಾಸಗಿ ಆಸ್ಪತ್ರೆಯವರನ್ನು ಮೆಚ್ಚಿಸುವ ಕೆಲಸ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದರು. ಜಿಲ್ಲಾಸ್ಪತ್ರೆಗೆ ಈಗಾಗಲೇ 7 ಕೋಟಿ ರೂ. ಅನುದಾನ ಕೊಡಿಸಿದ್ದೇನೆ. 15 ದಿನಗಳ ಒಳಗೆ 10 ಡಯಾಲಿಸಿಸ್ ಯೂನಿಟ್ ಕಳುಹಿಸುತ್ತೇನೆ. ಬಡ ರೋಗಿಗಳಿಗೆ ತೊಂದರೆ ಆಗದಂತೆ ಸುಧಾರಣೆ ತನ್ನಿ ಎಂದು ತಾಕೀತು ಮಾಡಿದರು.
ಶಿಸ್ತಿನ ಕ್ರಮದ ಎಚ್ಚರಿಕೆ: ಕೃಷಿ ಇಲಾಖೆ ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು, ಒಂದು ಸಣ್ಣ ದೂರು ಕೇಳಿ ಬಂದರೂ ಜಂಟಿ ನಿರ್ದೇಶಕರನ್ನು ಹೊಣೆ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆ. ರೈತರ ಸಮಸ್ಯೆ ನಿಮ್ಮ ಕುಟುಂಬದ ಸಮಸ್ಯೆ ಎಂದು ತಿಳಿದು ಸರ್ಕಾರದ ಸವಲತ್ತು ಒದಗಿಸಿ ಎಂದು ಆದೇಶಿಸಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯಗಳ ಕೊರತೆ ಪಟ್ಟಿಯನ್ನು ವಾರದ ಒಳಗೆ ತಯಾರಿಸಿ ಕೊಟ್ಟಲ್ಲಿ ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಮುನಿರತ್ನ ತಿಳಿಸಿದರು.
ನಕಲಿ ಔಷದಿ ಮಾರಟಕ್ಕೆ ಕಿಡಿ: ಜಿಲ್ಲೆಯ ಅನೇಕ ಗೊಬ್ಬರದ ಅಂಗಡಿಗಳಲ್ಲಿ ನಕಲಿ ಗೊಬ್ಬರ ಹಾಗೂ ಕಳಪೆ ಔಷಧ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಸಲ್ಲದು. ರೈತರಿಂದ ದೂರು ಬಂದ ಕೂಡಲೇ ಪರಿಶೀಲಿಸಿ, ತರಿಂದ ವರದಿ ತರಿಸಿಕೊಂಡು ತಪ್ಪಿತಸ್ಥರ ಅಂಗಡಿಗಳಿಗೆ ಬೀಗ ಜಡಿಯಿರಿ ಎಂದು ಮುನಿರತ್ನ ಸೂಚಿಸಿದರು. ಮಾಲೂರಿನಲ್ಲಿ ಕೋಲ್ಡ್ ಸ್ಟೋರೇಜ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಸಂಸ್ಕರಣಾ ಟಕ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಶಾಸಕಿ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದರು.
ಮಧ್ಯಮದವರಿಗೆ ಹೊರಹೋಗಲು ಸೂಚನೆ: ನಾಡಗೀತೆಯೊಂದಿಗೆ ಸಭೆ ಆರಂಭವಾಗುತ್ತಿದ್ದಂತೆ ಸಿಇಒ ಉಕೇಶ್ ಕುಮಾರ್, ಮಾಧ್ಯಮದವರನ್ನು ಸಭೆಯಿಂದ ನಿರ್ಗಮಿಸುವಂತೆ ಸೂಚಿಸಿದರು, ಇದರಿಂದ ಬೇಸತ್ತ ಮಾಧ್ಯಮದವರು, ಸಭೆಗೆ ಬರಲು ವಾರ್ತಾ ಇಲಾಖೆ ಮೂಲಕ ಆಹ್ವಾನಿಸುವವರು ನೀವೇ, ಈಗ ಹೋಗಿ ಎಂದು ಸೂಚಿಸುತ್ತಿದ್ದೀರಾ. ಇದು ಸರ್ಕಾರದ ಅಜೆಂಡಾನಾ ಎಂದು ಅಸಮಾಧಾನಗೊಂಡು ನಿರ್ಗಮಿಸಿದಾಗ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆಯಿಂದ ಎದ್ದು ಹೊರ ಬಂದು ಬೇಸರ ಪಟ್ಟುಕೊಳ್ಳಬೇಡಿ, ಸಭೆ ಬಳಿಕ ಸಚಿವರು ಮಾಹಿತಿ ನೀಡಲಿದ್ದಾರೆ ಎಂದು ಸಮಾಧಾನಪಡಿಸಿದರು.