

KCR suspend Daughter: ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಯ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ , ತಮ್ಮ ಮಗಳು, ವಿಧಾನಪರಿಷತ್ ಸದಸ್ಯೆ ಕೆ ಕವಿತಾರನ್ನು ಮಂಗಳವಾರ (ಸೆಪ್ಟೆಂಬರ್ 2) ಪಕ್ಷದಿಂದ ಉಚ್ಛಾಟಿಸಿದ್ದಾರೆ.
ಉಚ್ಛಾಟನೆ ಪತ್ರದಲ್ಲಿ, ಇತ್ತೀಚೆಗೆ ಕವಿತಾ, ಪಕ್ಷದ ನೀತಿಗಳು ಮತ್ತು ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಇಂತಹ ಪಕ್ಷವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಉಚ್ಛಾಟನೆಗೂ ಒಂದು ದಿನ ಮೊದಲು ಕವಿತಾ, ಪಕ್ಷದ ಗೌರವಕ್ಕೆ ಹಾನಿ ಮಾಡಿದ್ದಾರೆ ಮತ್ತು ಪಕ್ಷದ ಇತರೆ ನಾಯಕರನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಬಿಆರ್ಎಸ್ನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದರು. ಹಿರಿಯ ನಾಯಕ ಟಿ ಹರೀಶ್ ರಾವ್ ಮತ್ತು ಮಾಜಿ ಸಂಸದೆ ಮೇಘಾ ಕೃಷ್ಣ ರೆಡ್ಡಿ ಅವರು ತಮ್ಮ ತಂದೆ ಚಂದ್ರಶೇಖರ ರಾವ್ ಅವರಿಗೆ ಭ್ರಷ್ಟಾಚಾರದ ಹಣೆಪಟ್ಟಿ ಅಂಟಿಸಿದ್ದಾರೆ ಎಂದು ಆರೋಪಿಸಿದ್ದರು.
ಆಗಸ್ಟ್ 22 ರಂದು, ಕವಿತಾ ವಿದೇಶದಲ್ಲಿದ್ದ ವೇಳೆ, ತೆಲಂಗಾಣ ಬೊಗ್ಗು ಘನಿ ಕಾರ್ಮಿಕ ಸಂಘದ (ಟಿಬಿಜಿಕೆಎಸ್) ಗೌರವಾಧ್ಯಕ್ಷೆಯಾಗಿದ್ದ ಅವರನ್ನು ತೆಗೆದು ಹಾಕಿತ್ತು.
ಈ ಎಲ್ಲ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕವಿತಾ, ಇದು ರಾಜಕೀಯ ಪ್ರೇರಿತವಾಗಿದ್ದು, ಪಕ್ಷದ ಆಂತರಿಕ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ದ್ವೇಷ ಸಾಧಿಸಲಾಗಿದೆ ಎಂದು ಆರೋಪಿಸಿದರು. ಬಿಆರ್ಎಸ್ನ ಬೆಳ್ಳಿ ಮಹೋತ್ಸವ ಸಭೆಯ ನಂತರ ತನ್ನ ತಂದೆ ಮತ್ತು ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ಗೆ ಬರೆದಿದ್ದ ಪತ್ರ ಸೋರಿಕೆಯಾಗಿದ್ದರ ಬಗ್ಗೆಯೂ ಕಿಡಿ ಕಾರಿದರು.
ನಾನು ನನ್ನ ತಂದೆಗೆ ಬರೆದ ಪತ್ರವನ್ನು ದ್ವೇಷ ಸಾಧಿಸಲು ಉಪಯೋಗಿಸಿದ್ದು, ಅದನ್ನು ಸೋರಿಕೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ನಾನು ನೂರಾರು ಪತ್ರಗಳನ್ನು ಬರೆದಿದ್ದೇನೆ. ಪತ್ರ ಬರೆಯುವುದರಲ್ಲಿ ತಪ್ಪೇನಿದೆ?, ಪತ್ರ ಸೋರಿಕೆಯ ಬಗ್ಗೆ ತನಿಖೆ ಮಾಡುವ ಬದಲು, ಪಕ್ಷದ ನಾಯಕತ್ವ ನನ್ನ ವಿರುದ್ಧ ತಿರುಗಿಬಿದ್ದಿದೆ ಎಂದರು.
ನೀವು (ಕೆಸಿಆರ್) ಕೇವಲ ಎರಡು ನಿಮಿಷಗಳ ಕಾಲ ಮಾತನಾಡುತಿದ್ದಂತೆ ಮುಂಬರುವ ದಿನಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಏರ್ಪಡುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟರು. ನೀವು ಬಿಜೆಪಿ ವಿರುದ್ಧ ಬಲವಾಗಿ ಮಾತನಾಡಬೇಕಿತ್ತು ಎಂಬುದು ನನ್ನ ಭಾವನೆ, ಬಹುಶಃ ನಾನು ಬಿಜೆಪಿಯಿಂದ ಅನುಭವಿಸಿದ ಕಷ್ಟಕ್ಕೋ ಏನೋ, ಎಂದು ಕವಿತಾ ಪತ್ರದಲ್ಲಿ ಬರೆದಿದ್ದಾರೆ. (ಏಜೆನ್ಸೀಸ್)