

ಭದ್ರಾವತಿ: ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ನದಿಗೆ 35 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಕವಲುಗುಂದಿ ಗ್ರಾಮದ ನಿವಾಸಿಗಳ ಮನೆಗಳಿಗೆ ನೀರು ನುಗ್ಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ 30 ನಿವಾಸಿಗಳನ್ನು ನಗರದ ವಳ್ಳುವರ್ ಕಲ್ಯಾಣ ಮಂಟಪ್ಪದಲ್ಲಿ ತಾಲೂಕು ಆಡಳಿತ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹೆಚ್ಚುವರಿ ನೀರನ್ನು ಭದ್ರಾ ನದಿಗೆ ಬಿಟ್ಟ ಪರಿಣಾಮ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನದಿಯ ಮಧ್ಯ ಭಾಗದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ಸೇತುವೆ ಮೇಲೆ ಸಂಚಾರ ಸ್ಥಗಿತವಾಗಿದೆ.
ಸಿದ್ದಾರೂಢನಗರ ಬಳಿಯ ಹೊಸಸೇತುವೆ ಮೇಲೆ ಸಂಚಾರ ಬಂದ್ ಮಾಡಿರುವ ಕಾರಣ ಬಿ.ಎಚ್.ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ನಿರ್ವಹಣೆ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.