ಕೆಎಟಿಗೆ ಸ್ಪಷ್ಟನೆ ಸಲ್ಲಿಸಲು ಶಿಕ್ಷಣ ಇಲಾಖೆ ನಿರ್ಧಾರ

2020_2$largeimg_1395482891
Published on

ಬೆಂಗಳೂರು

ಶಿಕ್ಷಕರ ವರ್ಗಾವಣೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ಸೂಚನೆ ನೀಡಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಎಟಿಗೆ ಸ್ಪಷ್ಟನೆ ನೀಡಲು ನಿರ್ಧರಿಸಿದೆ.

ಕಡ್ಡಾಯ ವರ್ಗಾವಣೆಯಿಂದಾಗಿ ತೊಂದರೆಗೆ ಸಿಲುಕಿರುವ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2020&21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಚಿಕ್ಕಮಗಳೂರು ಜಿಲ್ಲೆಗೆ ಸೀಮಿತವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕರ್ನಾಟಕ ಆಡಳಿತಾತ್ಮ ನ್ಯಾಯ ಮಂಡಳಿ(ಕೆಎಟಿ)ಸೂಚಿಸಿತ್ತು.

ಇದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಡಚಣೆ ಉಂಟಾಗಲಿದ್ದು, ಸರ್ಕಾರ ತನ್ನ ಸಮರ್ಥನೆಯನ್ನು ಕೆಎಟಿಗೆ ಸಲ್ಲಿಸಲು ನಿರ್ಧರಿಸಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಾನೂನು ಸಲಹಾಗಾರರಿಂದ ಸಲಹೆ ಕೇಳಿದ್ದು, ಅದರಂತೆ ಇಲಾಖೆ ಅನುಸರಿಸುತ್ತಿರುವ ನಿಯಮವನ್ನು ಕೆಎಟಿಗೆ ಮನವರಿಕೆ ಮಾಡಿಕೊಡಲಿದೆ.

ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿ ವಿಚಾರಣೆಯನ್ನು ಡಿ.23ಕ್ಕೆ ಮುಂದೂಡಿರುವುದರಿಂದ ಸದ್ಯದ ವರ್ಗಾವಣೆಗೆ ಮಹತ್ವದ ಅಡಚಣೆ ಉಂಟಾಗುವುದಿಲ್ಲ. ಈಗಾಗಲೇ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆಯು 70 ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಿದೆ. ಜನವರಿ ಎರಡನೇ ವಾರದಲ್ಲಿ ಕೌನ್ಸೆಲಿಂಗ್​ ನಡೆಯಲಿದ್ದು, ಆ ವೇಳೆಗಾಗಲೇ ಈ ಪ್ರಕರಣ ಇತ್ಯರ್ಥವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೋಟ್​...

ವರ್ಗಾವಣೆಯಲ್ಲಿ ಸರ್ಕಾರ ಅನುಸರಿಸುತ್ತಿರುವ ನಿಯಮಗಳ ಬಗ್ಗೆ ಕೆಎಟಿಗೆ ಸ್ಪಷ್ಟನೆ ನೀಡುತ್ತೇವೆ. ಕೌನ್ಸೆಲಿಂಗ್​ಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ವರ್ಗಾವಣೆಗೆ ಸಮಸ್ಯೆ ಉಂಟಾಗುವುದಿಲ್ಲವೆಂದು ಭಾವಿಸಿದ್ದೇನೆ.

>ಅನ್ಬುಕುಮಾರ್​, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net