

ಮೂಡಿಗೆರೆ: ಎಂಜಿಎಂ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಂತ ವೈದ್ಯ ಡಾ.ಪ್ರಿಯಾಂಕ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದ ಸರ್ಕಾರದ ಆದೇಶಕ್ಕೆ ಕೆಎಟಿ ತಡೆ ನೀಡಿದ್ದರಿಂದ ಡಾ.ಶಾಂಭವಿ ಅವರು ಮತ್ತೆ ಆಎಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 2 ವರ್ಷದಿಂದ ಕಿವಿ, ಗಂಟಲು, ಮೂಗು ತಜ್ಞೆ ಡಾ.ಶಾಂಭವಿ ಆಸ್ಪತ್ರೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪ್ರತ್ಯೇಕ ಗುಂಪುಗಳಾಗಿತ್ತು. ಡಾ.ಶಾಂಭವಿ ಅವರನ್ನು ಆಡಳಿತಾಧಿಕಾರಿ ಹುದ್ದೆಯಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸಬೇಕು.ಆ ಹುದ್ದೆಯಲ್ಲಿ ಅವರೆ ಮುಂದುವರಿದರೆ ನಾವು ಇಲ್ಲಿಂದ ವರ್ಗಾವಣೆ ಪಡೆದು ಬೇರೆಡೆ ಹೋಗುತ್ತೇವೆ ಎಂದು ಆಸ್ಪತ್ರೆಯ 8 ಮಂದಿ ವೈದ್ಯಾಧಿಕಾರಿಗಳು ಹಠ ಹಿಡಿದು ಕುಳಿತಿದ್ದರು. ಆಸ್ಪತ್ರೆ ಅವ್ಯವಸ್ಥೆ ಹಾಗೂ ಸಿಬ್ಬಂದಿಗಳ ಮನಸ್ತಾಪದಿಂದ 14 ಮಂದಿ ವೈದ್ಯಾಧಿಕಾರಿಗಳಿದ್ದರೂ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ವಿಧಾನಸಭೆ ಚುನಾವಣೆ ಫಲಿತಾಂಶದ ಮರುದಿನ ಬೆಳಗ್ಗೆ ಶಾಸಕಿ ನಯನ ಮೋಟಮ್ಮ ದಿಢೀರ್ ಎಂಬಂತೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದಾಗ ಆಡಳಿತಾಧಿಕಾರಿ ಹುದ್ದೆಯಿಂದ ಡಾ.ಶಾಂಭವಿ ಅವರನ್ನು ಕೆಳಗಿಳಿಸಿ ಬೇರೊಬ್ಬರಿಗೆ ಆ ಹುದ್ದೆ ನೀಡಬೇಕು ಎಂದು ಒತ್ತಾಯ ಕೇಳಿ ಬಂದಿತ್ತು.
ಆಡಳಿತಾಧಿಕಾರಿ ಬದಲಾವಣೆ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಗುವುದು. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಹಿಸ ಬಾರದು ಹಾಗೊಂದು ವೇಳೆ ಲೋಪಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಅದರಂತೆ ಶಾಸಕಿ ನಯನ ಮೋಟಮ್ಮ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆ ಆಡಳಿತಾಧಿಕಾರಿ ಹುದ್ದೆಯಿಂದ ಡಾ.ಶಾಂಭವಿ ಅವರಿಗೆ ಕೋಕ್ ನೀಡಿ ಡಾ.ಪ್ರಿಯಾಂಕ ಅವರನ್ನು ನೇಮಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಕಳೆದ 15 ದಿನದ ಹಿಂದೆ ಡಾ.ಪ್ರಿಯಾಂಕ ಅವರನ್ನು ನೇಮಿಸಿ ಆರೋಗ್ಯ ಇಲಾಖೆ ಆಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಅವರ ಆದೇಶಕ್ಕೆ ಈಗ ಕೆಎಟಿ ತಡೆ ನೀಡಿದ್ದು ಡಾ.ಶಾಂಭವಿ ಮತ್ತೆ ಅದೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ.