ಪಶ್ಚಿಮಘಟ್ಟ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಸಭೆ; ಕಸ್ತೂರಿ ರಂಗನ್ ವರದಿ ಅಸಂವಿಧಾನಿಕ, ಇನ್ನೊಂದು ತಜ್ಞರ ಸಮಿತಿ ರಚನೆಗೆ ಆಗ್ರಹ

Forest Day
Published on

ಬೆಂಗಳೂರು:
ಪಶ್ಚಿಮಘಟ್ಟಗಳ ಬಗ್ಗೆ ಕಸ್ತೂರಿ ರಂಗನ್ ನೀಡಿರುವ ವರದಿ ಅಸಂವಿಧಾನಿಕವಾಗಿದ್ದು, ಮತ್ತೊಂದು ತಜ್ಞರ ಸಮಿತಿ ರಚನೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ 6ನೇ ಬಾರಿಗೆ ಅಧಿಸೂಚನೆ ಹೊರಡಿಸಿ 60 ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು. ರಾಜ್ಯ ಸರ್ಕಾರ ಇದೇ 27ರಂದು ಕೇಂದ್ರಕ್ಕೆ ತನ್ನ ವರದಿ ಸಲ್ಲಿಸಲಿದೆ ಎಂದರು.
ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಲಾಗಿದೆ. ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿಯೂ ಕಸ್ತೂರಿ ರಂಗನ್ ವರದಿಯನ್ನ ತಿರಸ್ಕರಿಸಲಾಗಿತ್ತು. ಈಗಲೂ ಈ ವರದಿ ಅಸಂವಿಧಾನಿಕವಾಗಿದ್ದು, ಮರು ಸರ್ವೆ ಮಾಡಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.
ರಾಜ್ಯದಲ್ಲಿ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಲು ನಮ್ಮ ಅಭ್ಯಂತರವಿಲ್ಲ. ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಬಫರ್ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ವ್ಯಕ್ತವಾಗಿದೆ ಎಂದರು.
ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಆತಂಕವಿದೆ. ಹಲವು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ ಹೀಗಾಗಿ ನಾಳೆಯ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದರು.

ವಿಶೇಷ ಪ್ಯಾಕೇಜ್ ಗೆ ಒತ್ತಾಯ:
ಈಗಾಗಲೇ ಇರುವ 16,114 ಚ.ಕಿ.ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1576 ಗ್ರಾಮಗಳ ಜನರ ಜೀವನೋಪಾಯಕ್ಕೆ ಅನಾನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪಶ್ಚಿಮ ಘಟ್ಟ ಕೇವಲ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಘಟ್ಟ ಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ ಮಿಗಿಲಾಗಿ ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯ ಹೊಣೆ ಕೇಂದ್ರದ್ದೂ ಆಗಿದೆ ಎಂದರು.

3 ಎಕರೆಯೊಳಗಿನ ಒತ್ತುವರಿ ತೆರವಿಲ್ಲ
ಒತ್ತುವರಿ ತೆರವಿನ ಬಗ್ಗೆ ತಾವು ನೀಡಿರುವ ಟಿಪ್ಪಣಿಗಳು ಸ್ಪಷ್ಟವಾಗಿವೆ. 2015ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. ಜೊತೆಗೆ 2015ರ ಸರ್ಕಾರದ ಆದೇಶ ಮತ್ತು ನಡವಳಿಯಂತೆ 3 ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಬಡ ರೈತರ ಒತ್ತುವರಿಯನ್ನು (ಪಟ್ಟಾಭೂಮಿ, ಒತ್ತುವರಿ ಸೇರಿ 3 ಎಕರೆ) ತೆರವು ಮಾಡಿಸುವುದಿಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾಸಕ ರಾಜೇಗೌಡರು 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವವರ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಮನವಿ ಮಾಡಿರುತ್ತಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸಭೆಯಲ್ಲಿ ಸಚಿವರುಗಳಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೋಳಿ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಶಾಸಕರುಗಳಾದ ಆರಗ ಜ್ಞಾನೇಂದ್ರ, ನಯನ ಮೋಟಮ್ಮ, ರಾಜೇಗೌಡ, ಹರೀಶ್ ಪೂಂಜಾ, ಸಂಸದರಾದ ಶ್ರೇಯಸ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net