

ಕಡೂರು: ಕಸಾಪ ತಾಲೂಕು ಘಟಕದಿಂದ ಆ.5ರಿಂದ ಸೆ.2ರವರೆಗೆ ಶ್ರಾವಣ ಮಾಸದ 29 ದಿನಗಳ ಕಾಲ ಶ್ರಾವಣ ನಿತ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಕಸಾಪದಿಂದ ಶ್ರಾವಣ ಸಂಜೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ತಾಲೂಕಿನಾದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ಕಸಾಪ ಮಹಿಳಾ ಘಟಕಗಳೂ ಸಹಕಾರ ನೀಡುತ್ತಿವೆ. ಶರಣರ ಆದರ್ಶ ಹಾಗೂ ಅವರ ತತ್ವಗಳು, ದಾಸ ಸಾಹಿತ್ಯ, ದಲಿತ ಸಾಹಿತ್ಯ ಪರಂಪರೆ ಹಾಗೂ ಗಮಕ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮವನ್ನು ಶ್ರಾವಣ ಮಾಸದಲ್ಲಿ ಏರ್ಪಡಿಸಲಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮ ಆ.5ರಂದು ಕಡೂರಿನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಆರಂಭಗೊಂಡು ಸೆ.2ರಂದು ಸಂಜೆ ಸಿಂಗಟಗೆರೆಯ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಕುಪ್ಪಾಳು ಶಾಂತಮೂರ್ತಿ, ಬಿ.ಚಂದ್ರಶೇಖರ್ ಇದ್ದರು.