ಪೊಲೀಸ್ ಭದ್ರತೆ ಕೋರಿದ ಕಸಾಪ ಜಿಲ್ಲಾಧ್ಯಕ್ಷ!

kasapa
ಪೊಲೀಸ್ ಭದ್ರತೆ ಕೋರಿ ಡಿ.ಮಂಜುನಾಥ್ ಅವರು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಜಿ.ವೆಂಕಟೇಶ್, ಕೃಷ್ಣಮೂರ್ತಿ ಹಿಳ್ಳೋಡಿ, ನಾರಾಯಣ್, ಕೆ.ಪಿ.ಶ್ರೀಪಾಲ್, ವೀರೇಂದ್ರ ಮುಂತಾದವರಿದ್ದರು.
Published on

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹಾಗೂ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ನಡುವಿನ ಅಸಮಾಧಾನ ತಾರಕಕ್ಕೇರಿದ್ದು, ಇದೀಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮೆಟ್ಟಿಲೇರಿದೆ. ಮೇ 14ರಂದು ಅಧ್ಯಕ್ಷರು ಸಭೆ ಕರೆದಿದ್ದಾರೆ. ಆ ಸಭೆಗೆ ತೆರಳಲು ನನಗೆ ಪೊಲೀಸ್ ಭದ್ರತೆ ಒದಗಿಸಬೇಕೆಂದು ಡಿ.ಮಂಜುನಾಥ್ ಸೋಮವಾರ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾನು ಕೆಲವು ವಿಷಯಗಳನ್ನು ಚರ್ಚಿಸಲು ಬಯಸಿದ್ದು, ಅನುಮತಿ ನೀಡುವಂತೆ ಡಾ. ಮಹೇಶ ಜೋಶಿ ಅವರಿಗೆ ಪತ್ರ ಬರೆದಿದ್ದೇನೆ. ಇದರಿಂದ ಅವರು ಸಿಟ್ಟಿಗೆದ್ದು ದ್ವೇಷದಿಂದ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷರ ಬೆಂಬಲಿಗರಿಂದಲೂ ನನಗೆ ಅಪಾಯವಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನನಗೆ ಪೊಲೀಸ್ ಭದ್ರತೆ ನೀಡಬೇಕು. ಮಹೇಶ ಜೋಷಿ ಅವರು ನೀಡುತ್ತಿರುವ ಮಾನಸಿಕ ಕಿರುಕುಳ ಮತ್ತು ಹಿಂದಿನ ಸಭೆಯಲ್ಲಿ ಅವರು ನನಗೆ ಮಾಡಿದ ಅಪಮಾನದ ಬಗ್ಗೆಯೂ ದೂರು ದಾಖಲಿಸುವುದಾಗಿ ಮಂಜುನಾಥ್ ತಿಳಿಸಿದ್ದಾರೆ.

ಕಸಾಪ ಸದಸ್ಯರಾದ ಕೃಷ್ಣಮೂರ್ತಿ ಹಿಳ್ಳೋಡಿ, ನವೀನ್‌ಕುಮಾರ್, ಕೆ.ಜಿ.ವೆಂಕಟೇಶ್, ನಾರಾಯಣ್, ಶಿವಪ್ಪ ಗೌಡ, ವಕೀಲರಾದ ಕೆ.ಪಿ.ಶ್ರೀಪಾಲ್, ವೀರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net