ಸಾಹಿತ್ಯ ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಬೇಕು; ಡಾ. ಶಿವಕುಮಾರ

je721538035802367-abc
Published on

ರಾಣೆಬೆನ್ನೂರ: ಕವಿಗಳಲ್ಲಿ ತಾಳ್ಮೆ ಅಗತ್ಯ, ಕವಿಗಳು ಸಾರ್ವತ್ರಿಕವಾಗಿರಬೇಕು. ಸಾಹಿತ್ಯ ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಿದಾಗ ಮಾತ್ರ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಉಪನ್ಯಾಸಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕವಿ ದೇವರಾಜ್​ ಹುಣಸಿಕಟ್ಟಿ ಬರೆದ ಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವಿದೆ. ಇಂತಹ ಸಾಧ್ಯತೆಗಳನ್ನು ಕವಿ ದೇವರಾಜ ತಮ್ಮ ಕೃತಿಯ ಕವನಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇಂದಿನ ಬರಹಗಾರರು, ಸಾಹಿತಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸತೀಶ ಕಲಕಣಿರ್ ಮಾತನಾಡಿ, ಕವಿತೆಗಳಲ್ಲಿ ನಿರಂತರ ಕೃಷಿ ಇರಬೇಕು. ಮೊನಚು, ನೇರ, ದಿಟ್ಟತನ ಇರಬೇಕು. ಇಂದಿನ ಯುವ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು. ಸಮಾಜಮುಖಿಯಾಗಿರಬೇಕಾದ ಇಂದಿನ ಅನೇಕ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕಾಣದಾಗಿದೆ. ಕೆಟ್ಟಿರುವ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವಲ್ಲಿ ನಿಷ್ಕ್ರೀಯರಾಗಿದ್ದಾರೆ. ಯಾವುದೇ ಕವನ ಸಾಹಿತ್ಯವಾಗಲಿ ಸ್ವಯಂಪ್ರೇರಿತವಾಗಿ ಅಭ್ಯಾಸ ಮಾಡುವುದರಿಂದ ಮತ್ತು ಅನುಭವದಿಂದ ಮಾತ್ರ ಬರಲು ಸಾಧ್ಯ ಎಂದರು.
ಸಾಹಿತಿ ದೀಪಾ ಗೋನಾಳ ಕೃತಿ ಪರಿಚಯ ಮಾಡಿದರು. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 20ಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನ ವಾಚಿಸಿದರು. ನಾಗರತ್ನ ಚಲವಾದಿ, ಪೂಣಿರ್ಮಾ, ಗೌತಮ್​ ಹಾಗೂ ಪ್ರೀತಮ ಸಾವಕ್ಕನವರ ಸ್ಯಾಕ್ಸೋಫೋನ್​ ವಾದನ ಮೆರಗು ನೀಡಿತು.
ಕಸಾಪ ನಿಕಟಪೂರ್ವ ಅಧ್ಯಕ್ಷ ವೀರೇಶ ಜಂಬಗಿ, ಕೃತಿಕಾರ ದೇವರಾಜ ಹುಣಸಿಕಟ್ಟಿ, ಚಿತ್ರ ಕಲಾವಿದ ನಾಮದೇವ ಕಾಗದಗಾರ, ಪ್ರಮುಖರಾದ ಅಭಿಲಾಷ್​ ಬ್ಯಾಡಗಿ, ಬಸವರಾಜ ಸಾವಕ್ಕನವರ, ಶಕುಂತಲಾ ಎಫ್​.ಕೆ., ಸೋಮಣ್ಣ ಲಮಾಣಿ ಇನ್ನಿತರರು ಇದ್ದರು.
ಮಾರುತಿ ತಳವಾರ ಸ್ವಾಗತಿಸಿದರು. ದ್ರಾಕ್ಷಾಯಣಿ ಉದಗಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net