

ಬೆಂಗಳೂರು: ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಡಿ.29ರಂದು ನಿಗದಿಯಾಗಿರುವ ಮರು ಪರೀಕ್ಷೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಅಭ್ಯರ್ಥಿ ಸೂಧಿರ್ತಿ ಬೈರಪ್ಪನವರ ಸಲ್ಲಿಸಿದ್ದ ಮೂಲ ಅರ್ಜಿಯಲ್ಲಿ ತಡೆಯಾಜ್ಞೆ ತೆರವು ಕೋರಿ ಕೆಪಿಎಸ್‌ಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಧಾರವಾಡದಲ್ಲಿ ಈ ಆದೇಶ ಮಾಡಿದೆ.
ಕೆಪಿಎಸ್‌ಸಿ, ಸರ್ಕಾರ ಮತ್ತು ಅರ್ಜಿದಾರರ ಪರ ಸಮಗ್ರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಮರು ಪರೀಕ್ಷೆಗೆ ಅ.16ರಂದು ನೀಡಿದ್ದ ಮಧ್ಯಂತರ ತಡೆ ಆದೇಶ ತೆರವುಗೊಳಿಸಿತು. ಅಲ್ಲದೆ, ಮರುಪರೀಕ್ಷೆಯನ್ನು ಇದೇ 29ರಂದು ನಿಗದಿಪಡಿಸಲಾಗಿದೆ.
ಅರ್ಜಿದಾರರು ಪರೀಕ್ಷೆಯಲ್ಲಿ ಪಾಲ್ಗೊಂಡು ಮತ್ತು ಪೂರ್ವಾಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ನಂತರ ಇಡೀ ಚಿತ್ರಣ ಬದಲಾಗುತ್ತದೆ, ಅರ್ಜಿ ಕೂಡ ಊರ್ಜಿತವಾಗುವುದಿಲ್ಲ. ಹಾಗಾಗಿ ಅರ್ಜಿದಾರರು ತಮ್ಮ ವಾದ ಏನೇ ಇದ್ದರೂ ಅದನ್ನು ಕರ್ನಾಟಕ ಆಡಳಿತ ನಾಯಮಂಡಳಿ(ಕೆಎಟಿ) ಮುಂದೆ ಮಂಡಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಆದೇಶಿಸಿದೆ.
ಆದರೆ ಪರೀಕ್ಷಾ ಲಿತಾಂಶವನ್ನು ಅಂದರೆ ಅರ್ಜಿದಾರರ ಉತ್ತರಪತ್ರಿಕೆಗಳನ್ನು ಕೆಪಿಎಸ್‌ಸಿ ಹಾಗೆಯೇ ಇಟ್ಟುಕೊಳ್ಳಬೇಕು. ಏಕೆಂದರೆ ಅರ್ಜಿದಾರರಿಗೆ ಕಾನೂನು ಹೋರಾಟದಲ್ಲಿ ವ್ಯತಿರಿಕ್ತ ಆದೇಶ ಬಂದರೆ ಅವುಗಳ ಅಗತ್ಯತೆ ಎದುರಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಹಾಗಾಗಿ ಕೆಪಿಎಸ್‌ಸಿ ಈ ಮೊದಲು ನಡೆಸಿದ ಪೂರ್ವಾಭಾವಿ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರಪತ್ರಿಕೆಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ.