ಕೆಎಎಸ್ ಮರು ಪರೀಕ್ಷೆ ಹೋರಾಟಕ್ಕೆ ಕರವೇ, ಎಬಿವಿಪಿ ಸಾಥ್

Karave Narayana gowda
Published on

ಬೆಂಗಳೂರು ಕೆಎಎಸ್ ಪ್ರಿಲಿಮ್ಸ್ ಮರು ಪರೀಕ್ಷೆಗೆ ಆಗ್ರಹಿಸಿ ನಡೆಸಲು ನಿರ್ಧರಿಸುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಎಬಿವಿಪಿ ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಭಾರತದ ನದಿ ವ್ಯವಸ್ಥೆಯನ್ನು ‘ಚರಂಡಿ ವ್ಯವಸ್ಥೆ, ಭಾರವಾದ ಬದಲಿಗೆ ಅತಿ ವೇಗವಾದ ಎಂದೂ, ಸಿಸ್ಟರ್ ಎಂಬುದಕ್ಕೆ ಸಹೋದರ, ರಾಜ್ಯ ವಿಧಾನಸಭೆ ಎಂಬುದಕ್ಕೆ ರಾಜ್ಯಸಭೆ, ಕಲೆ ಎಂದು ಕೊಡುವ ಬದಲು ವಸ್ತು ಎಂದೂ, ಬೇರಿನಾಕಾರದ ಎಂದು ಕೊಡುವ ಬದಲಿಗೆ ಸಸ್ಯಾಂಕಿತ ಎಂದೂ, ತಪ್ಪಾದ ಇಲ್ಲವೇ ಸರಿಯಿಲ್ಲದ ಎಂದು ಕೊಡುವ ಬದಲು ಸರಿಯಾದ ಎಂಬುದೂ ಸೇರಿ ಸುಮಾರು 60 ಪ್ರಶ್ನೆಗಳು ತಪ್ಪಾಗಿವೆ. ಈ ಕಾರಣದಿಂದ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಶ್ನೆಪತ್ರಿಕೆ ತಯಾರಿಸಲು ಕನಿಷ್ಠಮಟ್ಟದ ತಿಳಿವಳಿಕೆ, ಸೂಕ್ತ ತರಬೇತಿ ಮತ್ತು ಮಾನದಂಡವನ್ನು ಕೆಪಿಎಸ್ಸಿ ಹೊಂದಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ. ಇಷ್ಟು ಬೇಜವಾಬ್ದಾರಿ ಅಧಿಕಾರಿಗಳಿಗೆ ಅಥವಾ ಸಂಸ್ಥೆಗಳಿಗೆ ಕನ್ನಡಿಗರ ತೆರಿಗೆ ಹಣದಲ್ಲಿ ಕೋಟ್ಯಂತರ ರೂ.ಗಳನ್ನು ಸರ್ಕಾರ ವೆಚ್ಚ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಾವಂತರಿಗೆ ಪರಿಹಾರ ಕಲ್ಪಿಸಲು ಎಬಿವಿಪಿ ಆಗ್ರಹ:

ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆದು ಹುದ್ದೆಗೆ ನೇಮಕವಾಗುವ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ ಲೋಪದೋಷಗಳನ್ನು ನೋಡಿದರೆ, ಪರೀಕ್ಷೆಯನ್ನು ನಡೆಸುವ ಆಯೋಗಕ್ಕೆ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಡಿಮೆ ಮಾಡುತ್ತಿದೆ. ಪ್ರಶ್ನೆಪತ್ರಿಕೆ ತಯಾರಿಸಲು ಸಾಕಷ್ಟು ಸಮಯವಿದ್ದರೂ ಇತಿಹಾಸದಲ್ಲಿಯೇ ಇಷ್ಟು ಕಳಪೆ ದರ್ಜೆಯ ಪ್ರಶ್ನೆಪತ್ರಿಕೆಗಳನ್ನು ತಯಾರಿ ಮಾಡಿರುವುದು ದುರಾದೃಷ್ಟಕರ ಸಂಗತಿ. ಸರ್ಕಾರ ಕೂಡಲೇಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ಪರಿಹಾರ ಕಲ್ಪಿಸಬೇಕು ಇಲ್ಲವೇ ಮರು ಪರೀಕ್ಷೆ ನಡೆಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net