

ಬೆಂಗಳೂರು: ಹೈಕೋರ್ಟ್ ವಕೀಲೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಕುಣಿಗಲ್ ಮೂಲದ ಚೈತ್ರಾವತಿ (೩೪) ಮೃತ ದುರ್ದೈವಿ.
ಸಂಜಯ್ ನಗರದ ಅಣ್ಣಯ್ಯನಗರದಲ್ಲಿ ಮನೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪತಿ ಶಿವಕುಮಾರ್ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ವಕೀಲೆಯ ಪತಿ ಶಿವಕುಮಾರ್ ಕೆಎಎಸ್ ಅಧಿಕಾರಿಯಾಗಿದ್ದಾರೆ.
೨೦೧೬ ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ ೫ ವರ್ಷದ ಒಂದು ಮಗು ಇದೆ. ಈ ದಂಪತಿ ಸಂಜಯ್ನಗರದ ಅಣ್ಣಯ್ಯನಗರದಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಕಾರ್ಯನಿರ್ವಹಿಸುದ್ದಾರೆ. ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು. ಶನಿವಾರ ಬೆಳಗ್ಗೆ ೧೦ ಗಂಟೆಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನೊಂದಿಗೆ ಮಾತನಾಡಿದ್ದಾರೆ ೧೦.೩೦ ಕ್ಕೆ ಚೈತ್ರಾಳಿಗೆ ಸಹೋದರ ಕರೆದಾಗ ಆಕೆ ಸ್ಪಂದಿಸಿಲ್ಲ. ಇದರಿಂದ ಆತಂಕಗೊಂಡು ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಜಯ್ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿದ್ದಾರೆ. ಈ ಸಂಬಂಧ ಪ್ರಕರಣ ಅಹಜ ಸಾವು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಡೆತ್ ನೋಟ್ ಪತ್ತೆ:
ಚೈತ್ರಾರ ಬೆಡ್ ರೂಮಿನಲ್ಲಿ ಒಂದು ಪುಟದ ಡೆತ್‌ನೋಟ್ ಪತ್ತೆಯಾಗಿದೆ. ಆದರೆ ಮೂರು ತಿಂಗಳ ಹಿಂದೆ ಅಂದರೆ ಮಾ.೧೧ರಂದು ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಮೇಲ್ನೋಟಕ್ಕೆ ಹಿಂದೊಮ್ಮೆಯೂ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದರಾ? ಎಂಬ ಅನುಮಾನ ಮೂಡಿದೆ. ವೃತ್ತಿಯಲ್ಲಿ ವಕೀಲೆಯಾಗಿದ್ದ ಚೈತ್ರ ಪ್ರವೃತ್ತಿಯಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಳು. ದಂಪತಿ ನಡುವೆ ವೈಮನಸ್ಸುವಿತ್ತು ಎನ್ನಲಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ಡೆತ್‌ನೋಟ್‌ನಲ್ಲಿ ನನ್ನ ಪತಿ ತುಂಬಾ ಒಳ್ಳೆಯವರು, ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ. ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವ ವಿಚಾರಕ್ಕೆ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದು ಬಂದಿಲ್ಲ. ಕುಟುಂಬ ಕಲಹಕ್ಕೆ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಸಾವು ಆಗಿದ್ದೀಯಾ ಎಂದು ತನಿಖೆ ಕೈಗೊಳ್ಳಲಾಗಿದೆ.
ವರದಿ ಬಂದ ನಂತರ ಸಾವಿನ ಸತ್ಯಾಸತ್ಯತೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಪ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚೈತ್ರಾಳ ಮನೆಯಲ್ಲಿ ಒಂದು ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಅಂತಾ ಬರೆದಿರುವುದು ಗೊತ್ತಾಗಿದೆ. ಅದನ್ನು ಅವರೇ ಬರೆದಿದ್ದಾರಾ ಅಥವಾ ಬೇರೆ ಯಾರಾದರೂ ಬರೆದಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ವರದಿ ಬಂದ ನಂತರ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ. ಈ ಸಂಬಂಧ ತನಿಖೆ ಮುಂದುವರಿದೆ ಎಂದು ತಿಳಿಸಿದ್ದಾರೆ.