ಕರೂರು ದುರಂತ: ನ್ಯಾಯಾಂಗ ತನಿಖೆಗೆ ಆಗ್ರಹ | Stampede in Actor Vijay rally

IMG_20250928_120930
Published on

ಬೆಂಗಳೂರು: ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ಸಂಸ್ಥಾಪಕ, ಚಿತ್ರನಟ ವಿಜಯ್ ರಾಜಕೀಯ ರ‌್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ದಿಗ್ಭ್ರಾಂತಿ ಉಂಟು ಮಾಡಿದೆ. ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ತಮಿಳುನಾಡು ಡಿಎಂಕೆ ಸರ್ಕಾರಕ್ಕೆ ಬಿಜೆಪಿ ತಮಿಳುನಾಡು ಘಟಕದ ಉಸ್ತುವಾರಿ, ಕರ್ನಾಟಕದ ಸಹ ಉಸ್ತುವಾರಿ ಸುಧಾಕರರೆಡ್ಡಿ ಆಗ್ರಹಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಹಾಗೂ ಮಕ್ಕಳು ಕಾಲ್ತುಳಿತ ದುರಂತಕ್ಕೆ ಬಲಿಯಾಗಿರುವುದು ಕರುಳು ಹಿಂಡುತ್ತದೆ ಎಂದು ಮಮ್ಮಲ ಮರುಗಿದರು.

ದುರ್ಘಟನೆಗೆ ತಮಿಳುನಾಡು ಸರ್ಕಾರ ಹಾಗೂ ಸಂಘಟಕರು ಕೂಡ ಹೊಣೆಗಾರರಾಗಿದ್ದಾರೆ. ಹೈಕೋರ್ಟ್ ನಿರ್ದೇಶನ ನೀಡಿದರೂ ತಮಿಳುನಾಡು ಸರ್ಕಾರ ಪಾಲನೆ ಮಾಡಿಲ್ಲ. ಆಂಧ್ರಪ್ರದೇಶದಲ್ಲೂ ಇಂತಹುದೇ ದುರಂತ ಘಟಿಸಿತ್ತು. ತಮಿಳುನಾಡಿನ ವಿಜಯ್ ಅವರ ರಾಜಕೀಯ ರ‌್ಯಾಲಿಯಲ್ಲಿ ದೇಶವೇ ಕಂಡು ಕೇಳರಿಯದ ದುರಂತ ಘಟಿಸಿದೆ ಎಂದು ಸುಧಾಕರರೆಡ್ಡಿ ವ್ಯಥೆ ವ್ಯಕ್ತಪಡಿಸಿದರು.

ದೇಶವೇ ಬೆಚ್ಚಿ ಬಿದ್ದಿದೆ

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಏರ್ಪಡಿಸಿದ್ದ ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ 11 ಯುವಜನರು ಬಲಿಯಾದ ಆಘಾತದಿಂದ ಇನ್ನೂ ಹೊರಬಂದಿಲ್ಲ. ತಮಿಳುನಾಡಿನ ನಟ, ಟಿವಿಕೆ ನೇತಾರ ವಿಜಯ್ ರ‌್ಯಾಲಿಯಲ್ಲಿ ಮಕ್ಕಳು, ಮಹಿಳೆಯರು ಸೇರಿ 36ಕ್ಕೂ ಜನರು ಬಲಿಯಾಗಿದ್ದು ದೇಶವನ್ನೇ ಬೆಚ್ಚಿ ಬೀಳಿಸಿದೆ ಎಂದರು.

ದೇಶದ ರಾಜಕೀಯ ಇತಿಹಾಸದಲ್ಲಿ ಅನೇಕ ರ‌್ಯಾಲಿ, ಸಮಾವೇಶ, ಮೆರವಣಿಗೆಗಳು ನಡೆದಿದ್ದು, ಇಂತಹ ದುರಂತ ಸಂಭವಿಸಿಲ್ಲ. ತೀವ್ರ ಆಘಾತ ಉಂಟು ಮಾಡಿರುವ ಈ ದುರ್ಘಟನೆಗೆ ತಮಿಳುನಾಡು ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಕರೂರಿನ ಇಕ್ಕಟ್ಟಾದ ರಸ್ತೆ, ಕಿರಿದಾದ ಮೈದಾನದಲ್ಲಿ 10 ಸಾವಿರ ಜನರಿಗೆ ಅನುಮತಿ ಕೊಟ್ಟಿದ್ದರೆ ಲಕ್ಷ ಸಮೀಪ ಜನರು ಸೇರಿದ್ದರು. ಸುಮಾರು ಐದು ತಾಸು ತಡವಾಗಿ ರ‌್ಯಾಲಿ ಶುರುವಾಗಿದೆ. ಮಕ್ಕಳು, ಮಹಿಳೆಯರು ಊಟ, ನೀರಿಲ್ಲದೆ ಕಾದಿದ್ದಾರೆ. ದುರಂತದಲ್ಲಿ ವಿಜಯ್ ಹೊಣೆಯೂ ಇದ್ದು, ಕನಿಷ್ಠಪಕ್ಷ ಕ್ಷಮಾಪಣೆ ಕೂಡ ಕೇಳಿಲ್ಲ ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net