ಕರೂರು ಕಾಲ್ತುಳಿತ ದುರಂತ: ಘಟನೆ ಕುರಿತು ರಜಿನಿಕಾಂತ್​, ಕಮಲ್ ಹಾಸನ್ ಹೇಳಿದ್ದೇನು? | Karur Rally Stampede

ವಿಜಯವಾಣಿ - 2025-09-28T112747.013
Published on

Karur Rally Stampede: ನಿನ್ನೆ (ಸೆ.27) ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 40 ಮಂದಿ ದಾರುಣ ಅಂತ್ಯ ಕಂಡಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆಯ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಜಗನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ. ಇದರಲ್ಲಿ ಕೊಲೆ ಪ್ರಕರಣವೂ ಸೇರಿದೆ. ಈ ಹಿನ್ನೆಲೆಯಲ್ಲಿ ಇಂದು ಮತಿಯಜಗನ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಸ್ಥಳೀಯ ವರದಿಗಳು ಉಲ್ಲೇಖಿಸಿವೆ.

ಕಾಲ್ತುಳಿತ ದುರಂತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕರೂರ್​ ಸರ್ಕಾರಿ ಆಸ್ಪತ್ರೆಗೆ ಧಾವಿಸಿ, ಮೃತರಿಗೆ ಸಂತಾಪ ಸೂಚಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗಾಗಿ 1 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ.

ದುರಂತದ ಬಗ್ಗೆ ರಜಿನಿಕಾಂತ್​ ಪ್ರತಿಕ್ರಿಯೆ

"ಕಾಲ್ತುಳಿತ ದುರಂತ ಕುರಿತು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ ತಮಿಳು ಚಿತ್ರರಂಗದ ಹಿರಿಯ ನಟ ರಜಿನಿಕಾಂತ್​, ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಸುದ್ದಿ ಹೃದಯವಿದ್ರಾವಕ ಮತ್ತು ತೀವ್ರ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ" ಎಂದು ತಿಳಿಸಿದ್ದಾರೆ.

ಕಮಲ್ ಹಾಸನ್​ ಸಂತಾಪ

"ಈ ಸುದ್ದಿ ನನ್ನ ಹೃದಯ ಹಿಂಡುತ್ತಿದೆ. ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜನರಿಗೆ ನನ್ನ ಸಂತಾಪ. ಘಟನೆ ಬಗ್ಗೆ ಹೆಚ್ಚೇನು ಹೇಳಲು ನನ್ನಿಂದ ಸಾಧ್ಯವಿಲ್ಲ.. ಕಾಲ್ತುಳಿತದ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮೃತರ ಕುಟುಂಬಕ್ಕೆ ಸರಿಯಾದ ಪರಿಹಾರ ದೊರಕಲಿ ಎಂದು ನಾನು ತಮಿಳುನಾಡು ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net