

ಶಿವಮೊಗ್ಗ: ಕಾರ್ತಿಕ ಮಾಸದ ಅಂಗವಾಗಿ ಶಿವಮೊಗ್ಗ ಬಸವ ಕೇಂದ್ರದಿಂದ 18ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ನ.5ರಿಂದ ಡಿ.2ರವರೆಗೆ ಪ್ರತಿದಿನ ಸಂಜೆ 6.30ರಿಂದ ನಗರದ ವಿವಿಧೆಡೆ ಆಯೋಜಿಸಲಾಗಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಹೇಳಿದರು.
ಶರಣ ಚಳವಳಿಯ ಸಾರವಾಗಿರುವ ವಚನಗಳ ಹಲವು ನುಡಿಗಟ್ಟುಗಳು ಚಿಂತನೆಗೆ ಹಚ್ಚುವ ಗುಣ ಹೊಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕಕ್ಕೆ ವಚನಗಳ ನುಡಿಗಟ್ಟುಗಳನ್ನು ಆಯ್ದುಕೊಳ್ಳಲಾಗಿದೆ. ನ.5ರಂದು ವೆಂಕಟೇಶ ನಗರದ ಬಸವಕೇಂದ್ರದಲ್ಲಿ ಬೆಂಗಳೂರು ಬಸವ ಸಮಿತಿ ಮುಖ್ಯಸ್ಥ ಅರವಿಂದ ಜತ್ತಿ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯುತ್ ಇಲಾಖೆ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ್ ಉಪಸ್ಥಿತರಿರುವರು. ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಪ್ರಸನ್ನ ಡಿ. ಸಾಗರ, ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ವಿ.ಹರಿಪ್ರಸಾದ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಹಿರೇಮಳಲಿ ಮತ್ತಿತರರನ್ನು ಸನ್ಮಾನಿಸಲಾಗುವುದು ಎಂದರು.
ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ಡಿ.2ರಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗ ಬಸವ ಕೇಂದ್ರದಲ್ಲಿ ನಡೆಯಲಿದೆ. ಅಖಿಲ ಭಾರತೀಯ ವೀರಶೈವ-ಲಿಂಗಾಯತ ಮಹಾಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಪಾಲ್ಗೊಳ್ಳುವರು. ಅಂಕಣಗಾರ್ತಿ ಶ್ರೀರಂಜನಿ ದತ್ತಾತ್ರಿ ಅವರು ನಿತ್ಯ ತೃಪ್ತಂಗೆ ನೈವೇದ್ಯದ ಹಂಗೇಕೆ? ವಿಷಯದ ಬಗ್ಗೆ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಪ್ರತಿದಿನ ನಗರದ ವಿವಿಧೆಡೆ ನುಡಿಗಟ್ಟುಗಳ ಬಗ್ಗೆ ವಿಶೇಷ ಉಪನ್ಯಾಸ ಜರುಗಲಿವೆ. ಈ ಎಲ್ಲ ಕಾರ್ಯಕ್ರಮಗಳಿಗೆ ಶಿವಮೊಗ್ಗ ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು ಎಂದರು.
ಕಾರ್ಯದರ್ಶಿ ಚಂದ್ರಶೇಖರ್ ತಳಗಿಹಾಳ, ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಎಚ್.ಎನ್.ಮಹಾರುದ್ರ, ಕಿರಣ್‌ಕುಮಾರ್, ಚಂದ್ರಪ್ಪ, ಜಯಮ್ಮ ಕುಬ್ಸದ್, ಗಾಯತ್ರಿ ಪಾಟೀಲ್, ಆರ್.ಎಸ್.ಸ್ವಾಮಿ, ಎ.ಜಿ.ಹಾಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.