

ರಾಜಸ್ಥಾನ: ಭಾನುವಾರ (ಆಗಸ್ಟ್ 11) ರಾಜಸ್ತಾನದ ಉದಯಪುರದಲ್ಲಿ ರಜಪೂತ ಕರ್ಣಿ ಸೇನೆಯ ರಾಜ್ಯಾಧ್ಯಕ್ಷ ಭನ್ವರ್ ಸಿಂಗ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡ ಭನ್ವರ್, ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭನ್ವರ್ ಸಿಂಗ್ ಮೇಲೆ ಗುಂಡು ಹಾರಿಸಿದ ದಿಗ್ವಿಜಯ್ ಎಂಬ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ. ಉದಯಪುರದಲ್ಲಿ ರಜಪೂತ ಕರ್ಣಿ ಸೇನೆಯ ಸಭೆ ನಡೆಯುವ ವೇಳೆ ಈ ಗುಂಡಿನ ದಾಳಿ ಸಂಭವಿಸಿದೆ. ಸ್ಥಳದಲ್ಲಿದ್ದ ಸ್ಥಳೀಯರು ಆರೋಪಿಯನ್ನು ಗುರುತಿಸಿ, ಆತ ಓಡಿ ಹೋಗುವ ಮುನ್ನ ಹಿಡಿದು ಥಳಿಸಿದ್ದಾರೆ.
ಸ್ಥಳೀಯರು ಮತ್ತು ರಜಪೂತ ಕರ್ಣಿ ಸೇನೆಯ ಕಾರ್ಯಕರ್ತರು ಆರೋಪಿಯನ್ನು ಥಳಿಸುವ ವೇಳೆ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ. ಬಳಿಕ ದಿಗ್ವಿಜಯ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).