ಭಾರತ ಮಂಟಪಕ್ಕೆ ಕರ್ನಾಟಕದ ಅನುಭವ ಮಂಟಪ ಸ್ಪೂರ್ತಿ

pragathi maidan
Published on

ನವದೆಹಲಿ: ಉತ್ತೇಜನಾ ಸಂಸ್ಥೆ (ಐಟಿಪಿಒ) ಸುಧಾರಿತ ಸಮುಚ್ಚಯವಾದ ಇಂಟಿಗ್ರೇಟೆಡ್ ಎಕ್ಸಿಬಿಷನ್-ಕಮ್​ಕನ್ವೆನ್ಷನ್ ಸೆಂಟರ್​ಗೆ ಭಾರತ ಮಂಟಪ ಎಂದು ನಾಮಕರಣ ಮಾಡಲು ಕರ್ನಾಟಕದ ಬಸವೇಶ್ವರರ ಅನುಭವ ಮಂಟಪವೇ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅತ್ಯದ್ಭುತ ವಿನ್ಯಾಸಗಳೊಂದಿಗೆ ನಿರ್ವಣಗೊಂಡಿರುವ ಸುಧಾರಿತ ಸಮುಚ್ಚಯ ಐಟಿಪಿಒ ಉದ್ಘಾಟಿಸಿ ಮಾತನಾಡಿದ ಅವರು ಅನುಭವ ಮಂಟಪ ಎಂದರೆ ಚರ್ಚೆಯ ಪ್ರಜಾಸತ್ತಾತ್ಮಕ ವಿಧಾನದ ಸಂಕೇತ. ಇಂದು ಜಗತ್ತೇ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಒಪ್ಪಿಕೊಳ್ಳುತ್ತಿದೆ. ಕನಸುಗಳನ್ನು ನನಸಾಗಿಸುವುದೇ ನಮ್ಮ ಗುರಿ. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಭಾರತ ಮಂಟಪ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ. ಇದು ಭಾರತದ ಸಾಮರ್ಥ್ಯ ಮತ್ತು ಹೊಸ ಶಕ್ತಿಯ ಸಂಕೇತ ಎಂದು ಮೋದಿ ಬಣ್ಣಿಸಿದರು.

ಪ್ರಗತಿ ಮೈದಾನ ಸಂಕೀರ್ಣ ಎಂದೂ ಕರೆಯಲ್ಪಡುವ ಈ ಸಮುಚ್ಚಯುವ ಸುಮಾರು 123 ಎಕರೆ ಭೂಪ್ರದೇಶದಲ್ಲಿದೆ. ಇದು ಸ್ಥಳೀಯ ಹಾಗೂ ಜಾಗತಿಕ ಸಭೆ, ಸಮ್ಮೇಳನ ಹಾಗೂ ಪ್ರದರ್ಶನಗಳ ತಾಣವಾಗಿರಲಿದೆ. ಕೋವಿಡ್​ನ ಕಠಿಣ ಸಮಯದಲ್ಲಿ ದೇಶದ ಶ್ರಮಜೀವಿಗಳು ಈ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಶಕ್ತಿಮೀರಿ ದುಡಿದಿದ್ದಾರೆ. ಬೆಳಗ್ಗೆ ಅವರನ್ನು ಭೇಟಿ ಮಾಡಿ ಅಭಿನಂದಿಸುವ ಅವಕಾಶ ಸಿಕ್ಕಿತು ಎಂದರು.

ಸೆಪ್ಟೆಂಬರ್​ನಲ್ಲಿ ಜಿ20 ಸಮಾವೇಶ

ಜಿ20 ನಾಯಕರ ಶೃಂಗಸಭೆ ದೆಹಲಿಯ ಪ್ರಗತಿ ಮೈದಾನದ ಕನ್ವೆಂಷನ್ ಸೆಂಟರ್​ನಲ್ಲಿ ಸೆ. 9-10ರಂದು ನಡೆಯಲಿದ್ದು, 18ನೇ ಜಿ20 ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರದ ಶೃಂಗಸಭೆಯು ಮಂತ್ರಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಜಿ20 ಸಭೆಗಳು ನಡೆದಿದ್ದು, ದೆಹಲಿಯಲ್ಲಿ ಇವೆಲ್ಲವನ್ನೂ ಮೀರಿದ ಸಮ್ಮೇಳನ ನಡೆಯಲಿದೆ.

ಹೋಮ ಹವನ

ಬೆಳಗ್ಗೆ ಈ ಸಮುಚ್ಚಯಕ್ಕೆ ಭೇಟಿ ನೀಡಿದ ಪ್ರಧಾನಿ, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸೇರಿ ವಿವಿಧ ಕೇಂದ್ರ ಸಚಿವರ ಸಮ್ಮುಖದಲ್ಲಿ ಹೋಮ, ಹವನಗಳನ್ನು ಪೂರ್ಣಗೊಳಿಸಿದರು. ಧಾರ್ವಿುಕ ಕೈಂಕರ್ಯಗಳ ನೆರವೇರಿಸಲು ಕರ್ನಾಟಕದ ಶೃಂಗೇರಿ ಮಠದ ಪುರೋಹಿತ ವರ್ಗವನ್ನು ಕರೆಸಿ ಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಕೇಂದ್ರ ವಾಣಿಜ್ಯ ಸಚಿವಾಲಯದ ವ್ಯಾಪಾರ ಮಂಡಳಿ (ಬೋರ್ಡ್ ಆಫ್ ಟ್ರೇಡ್) ಸದಸ್ಯ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ನಟ ಆಮೀರ್ ಖಾನ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮುಚ್ಚಯದಲ್ಲಿ ಏನಿದೆ?

ಪ್ರಗತಿ ಮೈದಾನದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ 2,700 ಕೋಟಿ ವೆಚ್ಚದಲ್ಲಿ ಆಧುನಿಕ ವಿನ್ಯಾಸಗಳೊಂದಿಗೆ ಈ ಸಮುಚ್ಚಯ ನಿರ್ವಿುಸಲಾಗಿದೆ. ವಿಶ್ವದ ಶ್ರೇಷ್ಠ 10 ಪ್ರದರ್ಶನ ಮತ್ತು ಸಮಾವೇಶ ಸಮುಚ್ಚಯಗಳಲ್ಲಿ ಇದು ಸ್ಥಾನ ಪಡೆದಿರುವುದು ವಿಶೇಷ. ಕನ್ವೆನ್ಷನ್ ಸೆಂಟರ್​ನ ಹಂತ-3ರಲ್ಲಿ 7,000 ಜನರಿಗೆ ಭವ್ಯವಾದ ಆಸನ ವ್ಯವಸ್ಥೆಯಿದ್ದು, ಇದು ಆಸ್ಟ್ರೇಲಿಯಾದ ಪ್ರಸಿದ್ಧ ಸಿಡ್ನಿ ಒಪೆರಾ ಹೌಸ್​ನ ಸುಮಾರು 5,500 ಆಸನ ಸಾಮರ್ಥ್ಯಕ್ಕಿಂತಲೂ ದೊಡ್ಡದಾಗಿದೆ. ಸಮುಚ್ಚಯವು ವ್ಯಾಪಾರೋತ್ಪನ್ನಗಳು, ನಾವೀನ್ಯತೆ ಮತ್ತು ಆಲೋಚನೆಗಳ ಪ್ರದರ್ಶನಕ್ಕೆ ಏಳು ನವೀನ ಸ್ಥಳಗಳನ್ನು ಒದಗಿಸಿದೆ. ಪ್ರದರ್ಶಕರು ಮತ್ತು ಕಂಪನಿಗಳಿಗೆ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ವೇದಿಕೆಯಾಗಲಿದೆ. 5,500ಕ್ಕೂ ಹೆಚ್ಚು ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸಿಗ್ನಲ್-ಮುಕ್ತ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net