

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್. ರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ.
ಆಕಾಶವಾಣಿಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ನಾಗಮಣಿ ಎಸ್. ರಾವ್. ಅವರು ತಮ್ಮ ಹೆಸರಿನ ದತ್ತಿನಿಧಿಯನ್ನು ಕರ್ನಾಟಕ ಲೇಖಕಿಯರ ಸಂಘದಲ್ಲಿ ಸ್ಥಾಪಿಸಿದ್ದಾರೆ. ಇದು ಈ ವರ್ಷದಿಂದ ಪ್ರಾರಂಭವಾಗಿದ್ದು, ಮೊದಲನೇ ಪ್ರಶಸ್ತಿಗೆ ಆರ್. ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಸಮಾರಂಭವು ಜುಲೈ 8ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ನಾಡೋಜ. ಪ್ರೊ.ಕಮಲಾ ಹಂಪನಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ತಿಳಿಸಿದ್ದಾರೆ.
ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯವಾಗಿ ಕೆಲಸ ಮಾಡಿರುವ ಪತ್ರಕರ್ತೆಯೊಬ್ಬರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಬೇಕು ಮತ್ತು ಅವರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರಬೇಕು ಎಂಬುದು ನಾಗಮಣಿ ಎಸ್. ರಾವ್ ಅವರ ಆಶಯವಾಗಿತ್ತು. ಅದರಂತೆ ಕನ್ನಡ ಪತ್ರಿಕೋದ್ಯಮದಲ್ಲಿ ಸುಮಾರು 40 ವರ್ಷಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿರುವ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವ ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ನಾಗಮಣಿ ಎಸ್. ರಾವ್, ಸಂಘದ ಕಾರ್ಯದರ್ಶಿಗಳಾದ ಭಾರತಿ ಹೆಗಡೆ, ಖಜಾಂಚಿ ಮಂಜುಳಾ ಶಿವಾನಂದ ಉಪಸ್ಥಿತರಿದ್ದರು.