ರಾಜ್ಯದಲ್ಲಿ ಮುಂದುವರಿದ ಮಳೆ ಅಬ್ಬರ, ನಿಲ್ಲದ ಅವಾಂತರ; ಏಳು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೊಷಣೆ

Rain
Published on

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆ ಸುರಿದಿದ್ದು, ಹಲವೆಡೆ ಭಾರಿ ಅವಾಂತರ ಸೃಷ್ಠಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಘಟ್ಟ ಹಾಗೂ ಘಟ್ಟದ ತಪ್ಪಲಿನ ಭಾಗದಲ್ಲಿ ಗಾಳಿ, ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಕಾರ್ಕಳ- ಶೃಂಗೇರಿ - ಕುದುರೆಮುಖ ಸಂರ್ಪಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು ಕೆಲಕಾಲ ವಾಹನ ಸಂಚಾರ ಮೊಟಕುಗೊಂಡಿತ್ತು.

ಚಿಕ್ಕಮಗಳೂರು ಕೂಡಬೆಟ್ಟು ದೇವಸ್ಥಾನದ ಬಳಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಚಿಕ್ಕಮಗಳೂರು ಭಾಗದಲ್ಲಿ ಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ ಭೂ ಕುಸಿತ ಉಂಟಾಗಿರುವ ಸಾಧ್ಯತೆಯಿದೆ. ಹಲವು ಅಡಿಗಳಷ್ಟು ಅಗಲ ಹಾಗೂ ಉದ್ದಕ್ಕೆ ಘಟ್ಟದ ಕಾಡು ಪ್ರದೇಶ ಮರಗಳ ಸಹಿತ ಕುಸಿದಿದೆ. ಉತ್ತರ ಕನ್ನಡ. ಮೈಸೂರು, ಮಂಡ್ಯ, ಚಾಮರಾಜನಗರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆ ಸುರಿದಿದೆ.

ನದಿ ಪಾಲಾದ ಭತ್ತ: ಮಳೆಯಿಂದಾಗಿ ತುಂಗಭದ್ರಾ ನದಿ ನೀರಿನಲ್ಲಿ ಹರಿವು ಹೆಚ್ಚಾಗಿ ಹರಪನಹಳ್ಳಿ ತಾಲೂಕಿನ ತಾವರಗುಂದಿ ಗ್ರಾಮದಲ್ಲಿ ಒಣಗಲು ಹಾಕಿದ್ದ ಸುಮಾರು 1,500 ಕ್ವಿಂಟಾಲ್ ಭತ್ತದ ಫಸಲು ಸೋಮವಾರ ತಡರಾತ್ರಿ ಕೊಚ್ಚಿಹೋಗಿದೆ. ಹಾಸನ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆವರೆಗೂ ಸುರಿದ ಧಾರಾಕಾರ ಮಳೆ ಭಾರಿ ಪ್ರಮಾಣದಲ್ಲಿ ಬೆಳೆ, ಆಸ್ತಿ ನಷ್ಟವುಂಟು ಮಾಡಿದೆ.

ರಾಗಿ ಕಟಾವಿಗೆ ವರುಣಾಘಾತ: ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರಿ ನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಫಸಲು ನೆಲಕಚ್ಚಿದೆ. ನೆಲಕ್ಕೆ ಬಿದ್ದಿರುವ ರಾಗಿ ಮೊಳಕೆಯೊಡೆಯಲಾರಂಭಿಸಿದ್ದು ಆತಂಕ ಎದುರಾಗಿದೆ.

ನಾಲ್ಕು ದಿನ ವರ್ಷಧಾರೆ: ಅರಬ್ಬಿ ಸಮುದ್ರಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ನ.17ರಿಂದ ನ.20ರವರೆಗೆ ವ್ಯಾಪಕ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕೆಆರ್​ಎಸ್​ನಿಂದ 12,299 ಕ್ಯೂಸೆಕ್ ನೀರು ಹೊರಕ್ಕೆ: ಕೃಷ್ಣರಾಜಸಾಗರ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ +80 ಮಟ್ಟದ ಗೇಟುಗಳ ಮೂಲಕ 12,299 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 124.80 (ಗರಿಷ್ಠ 124.80 ಅಡಿ) ಅಡಿ ನೀರಿದ್ದು, 11,466 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 19 ದಿನಗಳಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 124.80 ಅಡಿ ಇರುವುದು ಮತ್ತೊಂದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net