ಕುಲಪತಿ ನೇಮಕಾತಿ ಯುಜಿಸಿ ನಿಯಮ ಹಿಂಪಡೆಯುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ

Dr M C Sudhakar
Published on

ಬೆಂಗಳೂರು: ಕುಲಪತಿಗಳ ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಗಳು ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಪಾತ್ರವನ್ನು ದುರ್ಬಲಗೊಳಿಸಲಿವೆ. ಈ ಹಿನ್ನೆಲೆಯಲ್ಲಿ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿ ಮತ್ತು ಬಡ್ತಿಗಾಗಿ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ಕ್ರಮಗಳು) ನಿಯಮಾವಳಿಗಳು-2025 ಅನ್ನು ಕೂಡಲೇ ಹಿಂಪಡೆಯಲು ನಿರ್ದೇಶನ ನೀಡುವಂತೆ ಕೋರಿ ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ದೇಶಾದ್ಯಂತ ಉನ್ನತ ಶಿಕ್ಷಣವನ್ನು ಬಲಪಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಯುಜಿಸಿ ಚರ್ಚಿಸುವಂತೆ ಸಲಹೆ ನೀಡಲು ಮನವಿ ಮಾಡಿದ್ದಾರೆ.

ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳು ಒಕ್ಕೂಟ ವ್ಯವಸ್ಥೆ ರಚನೆಗೆ ಹೊಡೆತ ಮತ್ತು ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸುವಲ್ಲಿ ರಾಜ್ಯ ಸರ್ಕಾರಗಳು ವಹಿಸುವ ಕಾನೂನುಬದ್ಧ ಪಾತ್ರವನ್ನು ಮೊಟಕುಗೊಳಿಸಲಿವೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರದ ಹೊರತಾದ ಕುಲಪತಿಗಳ ನೇಮಕಾತಿಯಲ್ಲಿ ಮತ್ತು ಅರ್ಹತೆ ವಿಷಯದಲ್ಲಿ ಗಂಭೀರ ಚರ್ಚೆಯ ಅಗತ್ಯವಿದೆ. ಈ ಮಾರ್ಗಸೂಚಿಗಳ ಪ್ರಕಾರ ಕುಲಪತಿಯನ್ನು ನೇಮಿಸದಿದ್ದರೆ, ನೇಮಕಾತಿಯು ಅನೂರ್ಜಿತವಾಗಿರುತ್ತದೆ. ಇದು ಕುಲಪತಿಗಳ ಅಧಿಕಾರಾವಧಿ ಮತ್ತು ಮರುನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ಶಾಸನಗಳ ನಿಬಂಧನೆಗಳಿಗೆ ವಿರುದ್ಧವಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಒಟ್ಟು ದಾಖಲಾತಿ ಅನುಪಾತದೊಂದಿಗೆ ಉನ್ನತ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ, ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನು ನಿರ್ವಹಿಸಲು ಮತ್ತು ನಡೆಸಲು ರಾಜ್ಯ ಸರ್ಕಾರವು ಗಣನೀಯ ಹಣವನ್ನು ಒದಗಿಸುತ್ತದೆ. ವಿಶ್ವವಿದ್ಯಾನಿಲಯಗಳಿಗೆ ಅಭಿವೃದ್ಧಿ ಅನುದಾನಗಳ ಹೊರತಾಗಿ, ನಿವೃತ್ತಿ ಹೊಂದಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನವನ್ನು ರಾಜ್ಯದ ಖಜಾನೆಯಿಂದ ಒದಗಿಸಲಾಗುತ್ತದೆ. ಇದಲ್ಲದೆ, ದಿನನಿತ್ಯದ ಆಡಳಿತದ ಸಮಸ್ಯೆಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ರಾಜ್ಯ ಸರ್ಕಾರವು ನಿರಂತರವಾಗಿ ಪರಿಹರಿಸುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರವು ಉತ್ತರಿಸಬೇಕು. ರಾಜ್ಯದಲ್ಲಿ ಚುನಾಯಿತ ಸರ್ಕಾರವು ಜವಾಬ್ದಾರಿಯುತವಾಗಿ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಗಳ ಹಕ್ಕನ್ನು ಮತ್ತು ಉನ್ನತ ಶಿಕ್ಷಣದ ಆಡಳಿತದಲ್ಲಿ ಸ್ವೀಕಾರಾರ್ಹವಲ್ಲದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ರಾಜ್ಯ ಸರ್ಕಾರವು ತನ್ನ ಜನರಿಗೆ ಗುಣಮಟ್ಟದ ಮತ್ತು ಸುಲಭವಾಗಿ ಉನ್ನತ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿ ಹೊಂದಿದೆ. ಕರಡು ಯುಜಿಸಿ ಮಾರ್ಗಸೂಚಿಗಳು ಈ ಜವಾಬ್ದಾರಿ ಮತ್ತು ಅಧಿಕಾರದ ಮೂಲವನ್ನು ಹೊಡೆಯುತ್ತವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net