ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತೆ ಎದುರಾದ ಕಂಟಕ

teacher
Published on

ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕಾರಣ ಇಲ್ಲಿಯವರೆಗೂ ನೇಮಕಾತಿ ಪತ್ರ ತೆಗೆದುಕೊಳ್ಳದ ಶಿಕ್ಷಕರು ತಮ್ಮ ನೇಮಕಾತಿ ಆದೇಶ ಪ್ರತಿಯನ್ನು ಪಡೆಯಲು ಮತ್ತಷ್ಟು ದಿನ ಕಾಯಬೇಕಾಗಿದೆ.

ಶಾಲಾ ಶಿಕ್ಷಣ ಇಲಾಖೆಯು 2023ರ ನವೆಂಬರ್‌ನಿಂದಲೇ ನೇಮಕಾತಿ ಆದೇಶ ಪ್ರತಿಯನ್ನು ಅರ್ಹರಿಗೆ ವಿತರಣೆ ಮಾಡುತ್ತಿದೆ. 15 ಸಾವಿರ ಶಿಕ್ಷಕರಲ್ಲಿ 13,352 ಮಂದಿ ಆಯ್ಕೆಯಾಗಿದ್ದರು. ಈ ಪೈಕಿ ಬಹುತೇಕರಿಗೆ ಆದೇಶ ಪ್ರತಿ ದೊರೆತಿದೆ. ಆದರೆ, ಸಿಂಧುತ್ವ ಪ್ರಮಾಣಪತ್ರ ಪಡೆಯಲು ವಿಳಂಬವಾಗಿರುವ ಅಭ್ಯರ್ಥಿಗಳು ಇಲ್ಲಿಯವರೆಗೂ ಆದೇಶ ಪ್ರತಿ ಪಡೆಯಲು ಸಾಧ್ಯವಾಗಿಲ್ಲ. ಅಂತಹ ಅಭ್ಯರ್ಥಿಗಳು ಮತ್ತಷ್ಟು ದಿನ ಕಾಯಬೇಕಾಗುತ್ತದೆ.

ವಿವಾಹಿತ ಮಹಿಳೆಯರು ತಂದೆಯ ಆದಾಯ ಪ್ರಮಾಣಪತ್ರ ನೀಡಿ ನೇಮಕವಾಗಿರುವುದನ್ನು ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ತೀರ್ಪು ಪ್ರಕಟವಾಗುವ ತನಕ ಆದೇಶ ಪ್ರತಿ ನೀಡದಂತೆ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಡಿಡಿಪಿಐ ಗಳು ಆದೇಶ ಪ್ರತಿ ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಬಳಿಕ ನೀಡುವ ತೀರ್ಪಿನ ಆಧಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಆದರೆ, ಈಗಾಗಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ. ತೀರ್ಪು ಪ್ರಕಟವಾಗುವ ತನಕ ಸೇವೆ ಸಲ್ಲಿಸಬಹುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net