

ಚಿಕ್ಕಬಳ್ಳಾಪುರ: ಪ್ರವಾಸಿತಾಣ ನಂದಿಬೆಟ್ಟದಲ್ಲಿ ಜು.2 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಇಲ್ಲಿನ ಮಯೂರ ಸಭಾಂಗಣದಲ್ಲಿ ಮಧ್ಯಾಹ್ನ 12 ಕ್ಕೆ ಪ್ರಾರಂಭವಾಗಿ ಪ್ರಮುಖ ವಿಷಯಗಳ ಚರ್ಚೆಯಾಗಲಿದೆ. ಇನ್ನಾಉ ಭರದ ಸಿದ್ಧತೆಗಳ ಪೂರ್ಣಗೊಂಡ ಬಳಿಕ ರಾಜ್ಯ ಸಚಿವ ಸಂಪುಟ ಸಭೆಯನ್ನು ಕೊನೆ ಕ್ಷಣದಲ್ಲಿ ನಂದಿ ಬೆಟ್ಟದಲ್ಲಿ ನಡೆಸದಿರುವ ತೀರ್ಮಾನದ ಘೋಷಣೆಯು, ಬೆಂಗಳೂರಿನಲ್ಲಿನ ಸಂಪುಟ ಸಭೆಯಲ್ಲೂ ಜಿಲ್ಲೆಗೆ ಏನೂ ಸಿಗದಿರುವುದು ಸ್ಥಳೀಯವಾಗಿ ಬೇಸರದ ಚರ್ಚೆಗೆ ಕಾರಣವಾಗಿತ್ತು. ಇದೀಗ ನಿರೀಕ್ಷೆ ಗರಿಗೆದರಿದೆ.
ರಾಜ್ಯ ಸಚಿವ ಸಂಪುಟ ಸಭೆಯನ್ನು ಜೂ.೧೯ ರಂದು ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಭರದ ಸಿದ್ಧತೆಯನ್ನು ಕೈಗೊಳ್ಳಲಾಗಿತ್ತು. ಗಿರಿಧಾಮದಲ್ಲಿ ಹದಗೆಟ್ಟ ರಸ್ತೆಗಳ ಡಾಂಬರೀಕರಣ, ನೆಹರು ನಿಲಯ ಸೇರಿದಂತೆ ಇತರ ಕಟ್ಟಡಗಳಿಗೆ ಬಣ್ಣ ಬಳಿಯುವುದು, ಉದ್ಯಾನ ಹಾಗೂ ಫುಟ್‌ಪಾತ್‌ಗಳು ಸೇರಿದಂತೆ ವ್ಯಾಪಕ ಸ್ವಚ್ಛತೆ ಕಾರ್ಯ, ವಸತಿ ಹಾಗೂ ಊಟ ವ್ಯವಸ್ಥೆಗಳಾಗಿದ್ದವು. ಪೊಲೀಸ್ ಇಲಾಖೆಯು ವಾರದಿಂದ ಬಿಗಿ ಭದ್ರತೆಗೆ ಪ್ಲಾನ್‌ನಲ್ಲಿ ತೊಡಗಿದ್ದರೆ, ಜಿಲ್ಲಾಡಳಿತದ ಮಾರ್ಗದರ್ಶನದಂತೆ ವಿವಿಧ ಇಲಾಖೆಗಳು ಅಲಾರ್ಟ್ ಆಗಿ ಗಿರಿಧಾಮದಲ್ಲಿ ನಿರ್ವಹಣೆಯ ಕೆಲಸಗಳಲ್ಲಿ ನಿರತರಾಗಿದ್ದವು. ಆದರೆ, ಕೊನೆ ಕ್ಷಣದಲ್ಲಿ ಸಚಿವ ಸಂಪುಟ ಸಭೆಯು ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಈಗ ಮತ್ತೆ ದಿನ ನಿಗದಿಯಾಗಿದೆ.