ಶಿಕ್ಷಣಕ್ಕೆ ಅನುದಾನ ಸಾಲದು; ತಜ್ಞರ ಅಭಿಪ್ರಾಯ

Mansoor
Published on

ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಆದ್ಯತೆ ನೀಡಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವುದಕ್ಕೆ ಈ ಅನುದಾನ ಕಡಿಮೆಯಾಗುತ್ತಿದೆ. ಕರೊನಾದಿಂದಾಗಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಹೆಚ್ಚಾಗಬಹುದೆಂಬ ಭಯ ಕಾಡುತ್ತಿದೆ. ಆದ್ದರಿಂದ ಆ ರೀತಿ ಆಗದಂತೆ ನೋಡಿಕೊಳ್ಳಲು ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಬಾರದು. ಶಿಕ್ಷಣ ಮೂಲಸೌಕರ್ಯಕ್ಕೆ ಇನ್ನೂ ಹೆಚ್ಚಿನ ಆದ್ಯತೆಯನ್ನು ಎಲ್ಲ ಸರ್ಕಾರಗಳು ನೀಡಲೇಬೇಕಾಗಿದೆ.

ಸರ್ಕಾರ 376 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಸಹಕಾರಿಯಾಗುತ್ತದೆ. ಗ್ರಾಮೀಣ ಭಾಗದ ಜನರು, ನಗರ ಪ್ರದೇಶದ ಬಡವರ ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣ ಇಂಥ ಶಾಲೆಗಳಿಂದ ಸಿಗುತ್ತದೆ. ಆದರೆ ಈ ಶಾಲೆಗಳನ್ನು ಸ್ಥಾಪನೆ ಮಾಡುವುದಕ್ಕೆ ಸಾಕಷ್ಟು ಅನುದಾನದ ಕೊರತೆ ಕಂಡು ಬರುತ್ತದೆ. ಪಬ್ಲಿಕ್ ಶಾಲೆಗಳಿಗೆ ಎಷ್ಟು ಹಣ ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಶಾಲೆಗಳನ್ನು ಸ್ಥಾಪನೆ ಮಾಡಲು ಮೂಲಸೌಕರ್ಯ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಈ ಉದ್ದೇಶಕ್ಕೆ ಒದಗಿಸಬೇಕಾಗುತ್ತದೆ.

ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿರುವುದು ಮತ್ತೊಂದು ಸ್ವಾಗತಾರ್ಹ ಕ್ರಮ. ಇದರಿಂದ ಉರ್ದು ಶಾಲೆಯಲ್ಲಿ ಕಲಿವ ಮಕ್ಕಳಿಗೆ ಇಂದಿನ ಸ್ಪರ್ಧಾ ದಿನಕ್ಕೆ ಅನುಕೂಲ ಆಗುವ ಶಿಕ್ಷಣ ಲಭ್ಯವಾಗುತ್ತದೆ. ಮಕ್ಕಳ ಬೆಳವಣಿಗೆಗೂ ಇದು ಪೂರಕ ಯೋಜನೆ. ಆದರೆ ಅನುದಾನ ಎಷ್ಟು ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಇಂಗ್ಲಿಷ್ ಇಂದಿನ ಅನಿವಾರ್ಯ ಎಂಬ ಪರಿಸ್ಥಿತಿ ಬಂದಿದೆ. ಶಿಕ್ಷಕರಿಗೆ ಇಂಗ್ಲಿಷ್ ಕಲಿಸಲು ತರಬೇತಿ ಕಾರ್ಯಕ್ರಮ ಆಯೋಜನೆಗೆಂದೇ 5 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಯೊಂದನ್ನು ಘೋಷಣೆ ಮಾಡಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಹಣವನ್ನು ಒದಗಿಸಬೇಕಾಗಿತ್ತು. ಆಗ ಗುಣಮಟ್ಟದ ತರಬೇತಿ ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತಿತ್ತು.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು 100 ಕೋಟಿ ರೂ.ಗಳನ್ನು ಸರ್ಕಾರ ಘೋಷಣೆ ಮಾಡಿದೆ. ತುರ್ತಾಗಿ ಆಗಬೇಕಾಗಿರುವ ಕಾರ್ಯ ಇದಾಗಿದೆ. ಶೌಚಾಲಯ, ಉತ್ತಮ ಕುಡಿಯವ ನೀರಿನಂತಹ ಮೂಲಸೌಕರ್ಯ ಒದಗಿಸಲು 100 ಕೋಟಿ ರೂ.ಗಳು ಸಾಲುವುದಿಲ್ಲ. ಇನ್ನೂ ಹೆಚ್ಚಿನ ಅನುದಾನ ನೀಡುವ ಕಡೆ ಸರ್ಕಾರ ಮುಂದಿನ ದಿನಗಳಲ್ಲಿ ಗಮನ ಹರಿಸಬೇಕಾಗಿದೆ.

ಮಹಾನಗರ ಪಾಲಿಕೆಗಳಲ್ಲಿ ಸಂಜೆ ಕಾಲೇಜು ಸ್ಥಾಪನೆ ಮಾಡುವುದು ಒಳ್ಳೆಯ ನಿರ್ಧಾರವಾಗಿದೆ. ಉದ್ಯಮ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸುವವರಿಗೆ ಇದರಿಂದ ಅನುಕೂಲವಾಗುತ್ತದೆ. ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಮುಂದಿನ ದಿನಗಳಲ್ಲಿ ಸಿಗುವಂತಾಗಬೇಕು. ಕರೊನಾದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಸಂಬಳ ಸಹ ನೀಡಲಾಗದ ಸ್ಥಿತಿ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಆರ್​ಟಿಇ ಶುಲ್ಕದ ಜತೆಗೆ ಈ ಕಡೆಗೂ ಗಮನ ಹರಿಸಬೇಕಾಗಿದೆ.

| ಮನ್ಸೂರ್ ಅಲಿಖಾನ್ ಶಿಕ್ಷಣ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net