

ಬೆಂಗಳೂರು: ಧಾರಕಾರ ಮಳೆ ಸುರಿದ ಹಿನ್ನಲೆ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು 95ಕ್ಕೂ ಅಧಿಕ ಮಂದಿ ದುರ್ಮರಣ ಹೊಂದಿದ್ದಾರೆ. ರಕ್ಷಣಾ ಪಡೆಯು ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದು, ಇದೀಗ ಭಾರತೀಯ ಸೇನೆ ಕೂಡ ಶೋಧ ಕಾರ್ಯಕ್ಕೆ ಕೈಜೋಡಿಸಿದೆ. ಈ ಮಧ್ಯೆ ನೆರೆಯ ಕೇರಳದಲ್ಲಿ ಉಂಟಾದ ಭೂದುರಂತ ಉಲ್ಲೇಖಿಸಿದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕದಲ್ಲಿಯೂ ಕಟ್ಟೆಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
"ನೆರೆಯ ಕೇರಳದಲ್ಲಿ ಸಂಭವಿಸಿರುವ ಭಾರೀ ಭೂ ಕುಸಿತದಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವ ತುರ್ತು ಅಗತ್ಯವಿದೆ. ಕೊಡಗು ಜಿಲ್ಲೆಯು ದುರಂತ ಸ್ಥಳ ವಯನಾಡಿನ ಪಕ್ಕದಲ್ಲೇ ಇದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅತಿ ಅಪಾಯದ ಸ್ಥಿತಿ ಇದೆ. ಅನೇಕ ಕಡೆ ರೆಟ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯ ಮುನ್ಸೂಚನೆ ಇದೆ. ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಕೆಲ ಜಿಲ್ಲೆಗಳಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ನೆರೆ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಲ್ಲಿನ ಅಣೆಕಟ್ಟೆಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ರಾಜ್ಯಕ್ಕೆ ಅಪಾರ ನೆರೆ ನೀರು ಹರಿದು ಬರುತ್ತಿದೆ" ಎಂದಿದ್ದಾರೆ.
"ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಅಪಾಯದ ಮಟ್ಟ ಮೀರಿ ನೂರಾರು ಗ್ರಾಮಗಳಿಗೆ ನುಗ್ಗಿದೆ, ಅಪಾರ ಬೆಳೆ ನಾಶವಾಗಿದೆ. ಈ ಕಷ್ಟದ ಸಮಯದಲ್ಲಿ ನಾವೆಲ್ಲರೂ ಜನರ ಜತೆಯಲ್ಲಿರಬೇಕು. ಸರಕಾರ, ಸಚಿವರು, ಶಾಸಕರು, ಅಧಿಕಾರಿಗಳಿಗೆ ನನ್ನ ಕಳಕಳಿಯ ಸಲಹೆ ಇಷ್ಟೇ. ಇಂಥ ದುರಂತ ಪರಿಸ್ಥಿತಿಯಲ್ಲಿ ಇಡೀ ಆಡಳಿತ ವ್ಯವಸ್ಥೆ ಜನರ ಹತ್ತಿರದಲ್ಲಿರಬೇಕು. ರೈತರೊಂದಿಗೆ ನೇರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು. ಪ್ರಕೃತಿ ವಿಕೋಪ ಯಾವುದೇ ಕ್ಷಣದಲ್ಲಿ ಬಂದೆರಗುವ ಅಪಾಯವನ್ನು ನಿರ್ಲಕ್ಷಿಸಬಾರದು" ಎಂದರು.
"ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಕೂಡಲೇ ಎಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಂ ಹೂಡಲು ನಿರ್ದೇಶಿಸಬೇಕು. ಜಿಲ್ಲಾಧಿಕಾರಿಗಳು ಸೇರಿ ಎಲ್ಲಾ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ 24/7 ಸನ್ನದ್ಧವಾಗಿರಬೇಕು. ಅಪಾಯದ ಸ್ಥಳಗಳಿಂದ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.