

ಶಿವಮೊಗ್ಗ: ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗಳ ಎಸ್‌ಡಿಎಂಸಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ತಾಲೂಕು ಎಸ್‌ಡಿಎಂಸಿ ಸಮನ್ವಯ ವೇದಿಕೆ ಕೋಶಾಧ್ಯಕ್ಷ ಎಂ.ಜಿ.ರುದ್ರೇಶ್ ಹೇಳಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಹೊಸದಾಗಿ ಕೆಪಿಎಸ್‌ಗಳನ್ನು ತೆರೆಯುತ್ತಿದೆ. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿರುವ ಕೆಪಿಎಸ್‌ಗಳ ಎಸ್‌ಡಿಎಂಸಿಗಳಿಗೆ ಶಾಸಕರೇ ಅಧ್ಯಕ್ಷರಾಗಿದ್ದಾರೆ. ಶಾಸಕರಿಗೆ ಅವರದ್ದೇ ಆದ ಕೆಲಸಗಳ ಒತ್ತಡ ಇರುವುದರಿಂದ ಕೆಪಿಎಸ್‌ಗಳ ಮೇಲೆ ನಿಗಾ ವಹಿಸುವುದು ಕಷ್ಟಕರವಾಗುತ್ತಿದೆ. ಎಸ್‌ಡಿಎಂಸಿಗಳ ಜವಾಬ್ದಾರಿಯನ್ನು ಶಾಸಕರಿಗೆ ನೀಡಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೆಚ್ಚು ಮಕ್ಕಳಿರುವ ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತನೆ ಮಾಡುತ್ತಿರುವುದು ಸರಿಯಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೆಪಿಎಸ್‌ಗೆ ಆಯ್ಕೆ ಮಾಡಬೇಕು. ಆಯಾ ಶಾಲೆಯ ಎಸ್‌ಡಿಎಂಸಿ ಒಪ್ಪಿಗೆ ಪಡೆದು ಕೆಪಿಎಸ್ ಶಾಲೆ ಪ್ರಾರಂಭಿಸಬೇಕು. ಮುಖ್ಯಶಿಕ್ಷಕ, ಸಹ ಶಿಕ್ಷಕರು ಸೇರಿ 18 ಜನರ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಿದರು.
ಬಹುತೇಕ ಶಾಸಕರ ಚಿತ್ತ ಖಾಸಗಿ ಶಾಲೆಗಳತ್ತ ಇದೆ. ಯಾವುದೇ ಕಾರಣಕ್ಕೂ ಕೆಪಿಎಸ್ ಶಾಲೆಗಳಲ್ಲಿ ಶಾಸಕರು ಹಾಗೂ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪಾಲಕರ ಜತೆಗೂಡಿ ಎಸ್‌ಡಿಎಂಸಿ ಸದಸ್ಯರು ಉಗ್ರ ಹೋರಾಟ ಅಥವಾ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರಿಬಸಪ್ಪ, ರಿಯಾಜ್ ಅಹಮ್ಮದ್, ಅಮೀರ್ ಪಾಷ, ಚಂದ್ರಶೇಖರ್, ಬಿ.ಅಶ್ವಿನಿ ಸುದ್ದಿಗೋಷ್ಠಿಯಲ್ಲಿದ್ದರು.