

ಬೈಕ್ ಹಿಂಬದಿ ಬ್ಯಾಸ್ಕೇಟ್ ಇಟ್ಟು ಐದು ಮಕ್ಕಳನ್ನು ಕೂರಿಸಿ ಪ್ರಯಾಣ.
ಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು, ಕ್ರಮ ಕೈಗೊಳ್ಳಲು ಒತ್ತಾಯ.
ಮೈಸೂರು-ನಂಜಗೂಡು ರಸ್ತೆಯಲ್ಲಿ ನಡೆದ ಘಟನೆ.
Karnataka viral news: ಮೈಸೂರು-ನಂಜಗೂಡು ರಸ್ತೆಯಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ 5 ಮಕ್ಕಳನ್ನು ಕಬ್ಬಿಣದ ಬ್ಯಾಸ್ಕೇಟ್ವೊಂದರಲ್ಲಿ ಕೂರಿಸಿ. ಕೋಳಿಗಳನ್ನು ಬೈಕ್ನಲ್ಲಿ ಸಾಗಿಸಿದಂತೆ ಮಕ್ಕಳ ಜೊತೆ ಪ್ರಯಾಣಿಸಿರುವುದು ಕಂಡುಬಂದಿದೆ. ಕೆಲ ಎಕ್ಸ್ ಬಳಕೆದಾರರು ಈ ವಿಚಾರವನ್ನು ತಮಾಷೆಯಾಗಿ ಸ್ವೀಕರಿಸಿದ್ದರೆ, ಇನ್ನೂ ಕೆಲವರು ಮಕ್ಕಳ ಸುರಕ್ಷತೆ ಬಗ್ಗೆ ದನಿ ಎತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಸನಾತನ ಕನ್ನಡ' ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಟಿವಿಎಸ್ ಎಕ್ಸೆಲ್ ಬೈಕ್ಮ ಹಿಂಬದಿ ಕಬ್ಬಿಣದ ಬ್ಯಾಸ್ಕೇಟ್ ಅಳವಡಿಸಿಕೊಂಡಿದ್ದಾರೆ. ಅದರಲ್ಲಿ ನಾಲ್ಕು ಮಕ್ಕಳನ್ನು ಕೂರಿಸಿಕೊಂಡಿದ್ದರೆ, ಮುಂಬಾಗದಲ್ಲಿ ಒಂದು ಮಗುವನ್ನು ಕೂರಿಸಿಕೊಂಡು ಪ್ರಯಾಣಿಸುತ್ತಿದ್ದಾರೆ. ಯಾವ ಮಗುವೂ ಕೂಡ ಯಾವುದೇ ರೀತಿಯ ರಕ್ಷಣಾ ಸಾಧನ ಅಥವಾ ಹೆಲ್ಮೆಟ್ ಧರಿಸಿರಲಿಲ್ಲ.
ಕೋಳಿಗಳನ್ನು ಸಾಗಿಸುವಂತಿದೆ
ವಿಡಿಯೋ ಹಂಚಿಕೊಂಡು ಕ್ಯಾಪ್ಶನ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಮೈಸೂರು-ನಂಜಗೂಡು ರಸ್ತೆಯಲ್ಲಿ: ಒಬ್ಬ ವ್ಯಕ್ತಿ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದ ಮೇಲೆ ಐದು ಮಕ್ಕಳನ್ನು, ಕೋಳಿ ಸಾಗಿಸುವಂತೆ ಸಾಗಿಸುತ್ತಿದ್ದಾನೆ. ಇದು ಭಾನುವಾರ, ಜನದಟ್ಟಣೆಯ ವಾರಾಂತ್ಯ ಮತ್ತು ಊಟಿ ಮುಖ್ಯ ರಸ್ತೆಯಾಗಿತ್ತು. ಈ ಮಕ್ಕಳ ಸುರಕ್ಷತೆಯ ಬಗ್ಗೆ ಯಾರಿಗಾದರೂ ಕಾಳಜಿ ಇದೆಯೇ?" ಎಂದು ಪ್ರಶ್ನಿಸಲಾಗಿದೆ. ಜೊತೆಗೆ ಈ ಪೋಸ್ಟ್ ಹಂಚಿಕೊಂಡು ಮೈಸೂರು ಪೊಲೀಸ್ ಆಯುಕ್ತರು ಹಾಗೂ ಮೈಸೂರು ಎಸ್‌ಪಿ ಅವರಿಗೆ ಟ್ಯಾಗ್ ಮಾಡಲಾಗಿದೆ.
ಇದು ನಾಚಿಕೆಗೇಡು, ಟ್ರಾಫಿಕ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೈವೇಗಳಲ್ಲಿ ಈಗಾಗಲೇ ಸಾಕಷ್ಟು ಅಪಘಾತ ನಡೆಯುತ್ತಿದೆ. ಇತ್ತೀಚೆಗೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು. ಈ ಮಧ್ಯೆ ಈ ವ್ಯಕ್ತಿ ಮಕ್ಕಳ ಸುರಕ್ಷತೆಯನ್ನು ಗಾಳಿಗೆ ತೂರಿರುವುದು ಅತ್ಯಂತ ಅಪಾಯಕಾರಿ ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಅವನು ಮಕ್ಕಳ ಜೀವದೊಂದಿಗೆ ಆಟವಾಡುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ.
ಒಬ್ಬ ಎಕ್ಸ್ ಬಳಕೆದಾರ ಬೈಕ್ ಸವಾರನ ಬಗ್ಗೆ ಕರುಣೆ ತೋರಿಸಿ ಟ್ವೀಟ್ಗೆ ಕಾಮೆಂಟ್ ಮಾಡಿದ್ದು ಹೀಗೆ, ಇದು ಒಂದು ರೀತಿಯ ಸಾರ್ವಜನಿಕ ಅವಮಾನ. ದಯವಿಟ್ಟು ಹೀಗೆ ಮಾಡಬೇಡಿ. ಇಲ್ಲಿ ನಿಮ್ಮ ಉದ್ದೇಶ ಒಳ್ಳೆಯದಿರಬಹುದು, ಆದರೆ ಇದು ಸರಿ ಅಲ್ಲ. ಜನರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ವೀಡಿಯೊ ಮಾಡಿ ಅವಮಾನಿಸುವ ಬದಲು ಸವಾರನ ಬಳಿ ನೇರವಾಗಿ ಮಾತನಾಡಬಹುದಿತ್ತು ಎಂದಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸವಾರನ ಹಿನ್ನೆಲೆ ಹಾಗೂ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಎನ್ನುವ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ, (ಏಜೆನ್ಸೀಸ್).