ಕರ್ನಾಟಕ ಅತಿ ಹೆಚ್ಚು ಪಕ್ಷಿ ಪ್ರಭೇದಗಳ ತವರು

hakki habba
ಕುವೆಂಪು ವಿವಿಯಲ್ಲಿ ಏರ್ಪಡಿಸಿದ್ದ ಹಕ್ಕಿ ಹಬ್ಬದಲ್ಲಿ ಕುಮಾರ್ ಪುಷ್ಕರ್, ಡಾ. ಶರತ್ ಅನಂತಮೂರ್ತಿ, ಹನುಮಂತಪ್ಪ, ಪ್ರಸನ್ನಕೃಷ್ಣ ಪಟಗಾರ್, ಎ.ಎಲ್.ಮಂಜುನಾಥ್, ಪ್ರೊ. ವಿಜಯಕುಮಾರ್, ಪ್ರೊ. ಎಸ್.ಎಂ.ಗೋಪಿನಾಥ್ ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ವನ್ಯಜೀವಿಗಳು ಮತ್ತು ಪ್ರಾಣಿ ಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮ ಅತ್ಯವಶ್ಯ. ಇದನ್ನು ಉತ್ತೇಜಿಸಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ, ಪರಿಸರ ಪ್ರವಾಸೋದ್ಯಮ ಮಂಡಳಿ ಸಿಇಒ ಕುಮಾರ್ ಪುಷ್ಕರ್ ಹೇಳಿದರು.

ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಯಾದ 25ನೇ ವರ್ಷದ ವಿಶೇಷ ಸಂದರ್ಭದಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಮಂಡಳಿ ಹಾಗೂ ಕುವೆಂಪು ವಿವಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಹಕ್ಕಿ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಪರಿಸರ ಪ್ರವಾಸೋದ್ಯಮ ನೀತಿ ರೂಪಿಸಿದ್ದು, ಸದ್ಯದಲ್ಲೇ ಅನುಮೋದನೆ ಪಡೆಯಲಾಗುವುದು. ಪರಿಸರ ಪ್ರವಾಸೋದ್ಯಮ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಪ್ರಕೃತಿ ಪ್ರಿಯರಿಗೆ ಟ್ರಕ್ಕಿಂಗ್ ಸೇರಿ ವಿವಿಧ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯವು ಅತಿ ಹೆಚ್ಚು ಪಕ್ಷಿ ಪ್ರಭೇದಗಳಿಗೆ ತವರಾಗಿದೆ. ಬೇರೆಲ್ಲ ರೀತಿ ಪ್ರಾಣಿಗಳಿಗಿಂತಲೂ ಹೆಚ್ಚಿನ ಪಕ್ಷಿಗಳ ಪ್ರಭೇದಗಳು ಇಲ್ಲಿವೆ. ರಾಜ್ಯ 1,359 ಪಕ್ಷಿ ಪ್ರಭೇದಗಳ ಬೀಡಾಗಿದೆ. ಜಾಗತಿಕವಾಗಿರುವ ಪಕ್ಷಿಗಳ ಸಂಕುಲದ ಶೇ.10 ಭಾರತದಲ್ಲಿವೆ. ಅನೇಕ ಅಳಿವಿನಂಚಿನಲ್ಲಿರುವ ಪಕ್ಷಿಗಳು ಕರ್ನಾಟಕದಲ್ಲಿ ಸಂರಕ್ಷಣೆಯಾಗಿವೆ ಎಂದರು.
ಕುಲಪತಿ ಡಾ. ಶರತ್ ಅನಂತಮೂರ್ತಿ ಮಾತನಾಡಿ, ಸಫಾರಿ ಇಂದು ಜನಪ್ರಿಯ ಚಟುವಟಿಕೆಯಾಗಿದೆ. ಸಫಾರಿ ಹೋದಾಗ ಪ್ರಾಣಿ, ಪಕ್ಷಿಗಳು ನಮಗೆ ಎದುರಾಗುತ್ತವೆ. ಕೆಲವೇ ತಾಸಿನಲ್ಲಿ ಎಲ್ಲವನ್ನೂ ನೋಡುವ ಹಂಬಲ ಜನರಿಗಿರುತ್ತದೆ. ಆದರೆ ಇದೊಂದು ಧ್ಯಾನ. ಮಾನವ-ಪ್ರಕೃತಿ-ಪ್ರಾಣಿ ಸಂಕುಲದ ನಂಟು, ಸೂಕ್ಷ್ಮತೆಗಳನ್ನು ಅರಿತು ನಂತರ ಸಫಾರಿಗೆ ತೆರಳಬೇಕು. ಸಫಾರಿಯಲ್ಲಿ ಸಾಕಷ್ಟು ತಾಳ್ಮೆ ಬೇಕು ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಸಿಸಿಎಫ್ ಹನುಮಂತಪ್ಪ, ಶಿವಮೊಗ್ಗ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಭದ್ರಾ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಯಶ್ಪಾಲ್ ಕ್ಷೀರಸಾಗರ್, ಕಾರ್ಯಯೋಜನೆ ಅಧಿಕಾರಿ ಸೋನಾಲ್, ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ಕುವೆಂಪು ವಿವಿ ವನ್ಯಜೀವಿ ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ್ ಇದ್ದರು.
ಹುಲಿಗಳ ಸಂಖ್ಯೆ ಏರಿಕೆ:ಭದ್ರಾ ಹುಲಿ ಸಂರಕ್ಷಿತ ಅರಣ್ಯದ 25ನೇ ವರ್ಷದ ಅಂಗವಾಗಿ ಹಕ್ಕಿ ಹಬ್ಬ ಏರ್ಪಡಿಸಲಾಗಿದೆ. ಆರಂಭದಲ್ಲಿದ್ದ 5 ಹುಲಿಗಳ ಸಂಖ್ಯೆ ಈಗ 35ಕ್ಕೇರಿದೆ. ಕರ್ನಾಟಕದ ಪಕ್ಷಿ ಪ್ರಭೇದಗಳನ್ನು ನೆನೆಯಲು ಹಾಗೂ ಸಂರಕ್ಷಿಸಲು 2015ರಿಂದ ಪ್ರತಿ ವರ್ಷ ಹಕ್ಕಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿಗಳು ಕಾಡುಗಳ ವೃದ್ಧಿಗೆ, ಅಧಿಕವಾಗುವ ಕೀಟಗಳ ನಾಶಕ್ಕೆ ಕಾರಣವಾಗುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಮತೋಲನ ಮಾಡುತ್ತವೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net