ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಿರುಕುಳ: 8 ತಿಂಗಳಿನಿಂದ ಹೋರಾಡುತ್ತಿರುವ ಬಳ್ಳಾರಿ ರೈತರಿಗೆ ಸಿಎಂ ಭರವಸೆ

Kishan
Published on

ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದು ಸುಸ್ತಿದಾರರಾಗಿರುವ ಬಳ್ಳಾರಿಯ ರೈತರಿಗೆ ಓಟಿಎಸ್(ಒನ್ ಟೈಂ ಸೆಟ್ಲ್‌ಮೆಂಟ್) ಯೋಜನೆಯಡಿ ಅನುಕೂಲ ಕಲ್ಪಿಸಲು ಸಂಬಂಧಪಟ್ಟವರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಬಿ.ಆರ್. ಪಾಟೀಲ್ ತಿಳಿಸಿದರು.

ಶಾಸಕರ ಭವನ-2ರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದಿದ್ದು ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಬ್ಯಾಂಕ್‌ನವರು ಸಾಲ ವಸೂಲಿಗೆ ಪದೇ ಪದೆ ನೋಟಿಸ್ ಕಳುಹಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಸಮಸ್ಯೆ ಪರಿಹರಿಸಲು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಲಾಯಿತು ಎಂದು ವಿವರಿಸಿದರು.

ಬ್ಯಾಂಕ್‌ನ ಮುಖ್ಯಸ್ಥರು, ನಬಾರ್ಡ್ ಹಾಗೂ ಪ್ರವರ್ತಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಮತ್ತು ರೈತರ ಹಿತ ಕಾಯಲು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಮಧ್ಯಪ್ರದೇಶದ ಮಾಜಿ ಶಾಸಕ ಡಾ.ಸುನೀಲಂ, ಸಮಾಜವಾದಿ ನಾಯಕರಾದ ಬಿ.ಆರ್.ರಾಮೇಗೌಡ, ಅಲಿಬಾಬಾ, ರೈತ ಮುಖಂಡ ಬಡಗಲಪುರ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

24ರಂದು ಬಳ್ಳಾರಿಯಲ್ಲಿ ಸಭೆ

ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕಳೆದ 8 ತಿಂಗಳಿನಿಂದ ಬಳ್ಳಾರಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಮುಂದುವಿಸುವುದೋ ಬೇಡವೋ ಎಂಬುದರ ಬಗ್ಗೆ ಚರ್ಚಿಸಲು ಆ.24ರಂದು ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಮಾಧವ ರೆಡ್ಡಿ ಆರ್. ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net