ಗೀತಾ ಪಾಲನೆಯಿಂದ ಜೀವನ ಸಾಫಲ್ಯ..

Lead 1
Published on

ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅಭಿಮತ

ಉಡುಪಿಯಲ್ಲಿ ಮಂಡಲೋತ್ಸವಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜದಲ್ಲಿ ಅಸಹಿಷ್ಣುತಾ, ಆತ್ಮ ವಿಸ್ಮೃತಿಯ ಭಾವನೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂಬ ಶ್ರೀಕೃಷ್ಣ ಬೋಧಿಸಿದ ಗೀತೆಯ ಶ್ಲೋಕವು ನಮಗೆ ಸನ್ಮಾರ್ಗ ತೋರುತ್ತದೆ. ಕರ್ಮ, ಜ್ಞಾನ ಹಾಗೂ ಭಕ್ತಿಯೋಗ ಮಾರ್ಗದ ಮೂಲಕ ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ತವ್ಯ ಮಾಡಬೇಕು. ಧರ್ಮದ ಪಾಲನೆಯಿಂದ ಮಾತ್ರ ಜೀವನ ಸಾಫಲ್ಯ ಕಾಣಲು ಸಾಧ್ಯ ಎಂದು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ 48 ದಿನಗಳ ಕಾಲ ಆಯೋಜಸಿರುವ ಮಂಡಲೋತ್ಸವ ಕಾರ್ಯಕ್ರಮಕ್ಕೆ ಜುಲೈ 25ರಂದು ಸಂಜೆ ಚಾಲನೆ ನೀಡಿ ಮಾತನಾಡಿದರು.

ಪುತ್ತಿಗೆ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ

22
ಪುತ್ತಿಗೆ ಶ್ರೀಗಳು ಮಠದ ಪರಂಪರೆಯನ್ನು ರಾಜ್ಯ-ದೇಶದಲ್ಲಷ್ಟೇ ಅಲ್ಲದೆ, ವಿಶ್ವದ ವೇದಿಕೆಯಲ್ಲೂ ಸಹ ಪ್ರಚುರಪಡಿಸುತ್ತಿದ್ದಾರೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಂತಹ ನೆಲದಲ್ಲೂ ಸನಾತನ ಧರ್ಮ ಪ್ರಚಾರ ನಡೆಸಿದ್ದಾರೆ. ವಿಶ್ವವನ್ನು ಭಾರತೀಯ ಸಂಸ್ಕೃತಿಯೊಂದಿಗೆ ಜೋಡಿಸುತ್ತಿರುವ ಶ್ರೀಗಳ ಕಾರ್ಯ ಅನನ್ಯ ಎಂದು ಬಣ್ಣಿಸಿದರು.

ಶ್ರೀಕೃಷ್ಣ ಭಕ್ತ ವತ್ಸಲ

44
ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಶ್ರೀಕೃಷ್ಣನು ಭಕ್ತವತ್ಸಲನಾಗಿದ್ದಾನೆ. ಭಕ್ತರನ್ನು ಹರಸಲು ಶ್ರೀಕೃಷ್ಣ ದ್ವಾರಕೆಯಿಂದ ಉಡುಪಿಗೆ ಬಂದಿದ್ದಾನೆ. ರುಕ್ಮಿಣಿಯಿಂದ ಪೂಜಿಸಲ್ಪಟ್ಟ ಕೃಷ್ಣನ ಮೂರ್ತಿಯನ್ನು ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. 5 ಶತಮಾನದ ಹಿಂದೆ ಕನಕದಾಸರಿಗೂ ಸಹ ಕೃಷ್ಣನು ಉಡುಪಿಯಲ್ಲಿ ವಿಶೇಷ ದರ್ಶನ ನೀಡಿದ್ದಾನೆ. ಹೀಗಾಗಿಯೇ ಕೃಷ್ಣನನ್ನು ಭಕ್ತವತ್ಸಲ ಎಂದು ಕರೆಯುತ್ತಾರೆ. ನಮ್ಮ ರಾಜ್ಯಪಾಲರೂ ಸಹ ಶ್ರೀಕೃಷ್ಣನ ಭಕ್ತರೇ ಆಗಿದ್ದು, ಶ್ರೀಕೃಷ್ಣ ಲೀಲಾ ಮಹೋತ್ಸವದ ಕಾರ್ಯಕ್ರಮವಾದ ಮಂಡಲೋತ್ಸವಕ್ಕೆ ಅವರು ಚಾಲನೆ ನೀಡಿರುವುದು ಅತೀವ ಸಂತಸ ತಂದಿದೆ ಎಂದರು.

ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ, ಶಾಸಕ ಯಶ್​ಪಾಲ್​ ಸುವರ್ಣ, ಉದ್ಯಮಿಗಳಾದ ಡಾ. ಎಚ್​.ಎಸ್​. ರಾಘವೇಂದ್ರ ರಾವ್​, ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ರಮೇಶ ಭಟ್​ ಉಪಸ್ಥಿತರಿದ್ದರು.

33
ಆರಂಭದಲ್ಲಿ ರಾಷ್ಟ್ರಗೀತೆ ಹೇಳಲಾಯಿತು. ರಾಘವೇಂದ್ರ ಆಚಾರ್ಯ ವೇದಘೋಷ ಹೇಳಿದರು. ರಾಜ್ಯಪಾಲರಿಗೆ ಮಾಹಿತಿ ನೀಡಲು ಪುತ್ತಿಗೆ ಮಠದ ಇತಿಹಾಸ ಹಾಗೂ ಸುಗುಣೇಂದ್ರ ಶ್ರೀಗಳ ಸಾಧನೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕೆ.ರಮಣ ಆಚಾರ್ಯ ಸ್ವಾಗತಿಸಿದರು. ಶ್ರೀಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಉಷಾ ಹೆಬ್ಬಾರ ತಂಡದಿಂದ ಕೃಷ್ಣಗೀತಾ ಭಜನಾ ಕಾರ್ಯಕ್ರಮ, ಯುವತಿಯರಿಂದ ಕೋಲಾಟ ನೃತ್ಯ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ರಾಜ್ಯಪಾಲ ಗೆಹಲೋತ್​ ಅವರಿಗೆ ಪರ್ಯಾಯ ಸುಗುಣೇಂದ್ರ ಶ್ರೀಗಳು ಶ್ರೀಕೃಷ್ಣ-ಮುಖ್ಯಪ್ರಾಣರ ದರ್ಶನ ಮಾಡಿಸಿ, ಸರ್ವ ಪ್ರಸಾದ ನೀಡಿ ಆಶೀರ್ವದಿಸಿದರು. ಕಿರಿಯ ಶ್ರೀ ಸುಶ್ರೀಂದ್ರ ಶ್ರೀ ಉಪಸ್ಥಿತರಿದ್ದರು.

ಜನ್ಮಾಷ್ಟಮಿ ವಿಶ್ವಕ್ಕೆ ವಿಶೇಷ. ಆದರೆ, ಉಡುಪಿಗೆ ಹಾಗೂ ಇಲ್ಲಿನ ಜನರಿಗೆ ಹೃದಯಂಗಮ ಉತ್ಸವ. ಈ ಉತ್ಸವಕ್ಕೆ ಮಂಡಲೋತ್ಸವ ಇನ್ನಷ್ಟು ಮೆರಗು ನೀಡಲಿದೆ. ಎಲ್ಲರೂ ಪಾಲ್ಗೊಳ್ಳಬೇಕು. ಕೃಷ್ಣಜ್ಞಾನ ಮೈದುಂಬಿಸಿಕೊಳ್ಳಬೇಕು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಕಿರಿಯ ಶ್ರೀ

ಭಗವದ್ಗೀತೆಯ ಸಾರ ಅನುಸರಿಸೋಣ

BOX Photo
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮೆಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ರಾಜ್ಯಪಾಲ ಗೆಹಲೋತ್​, ಶ್ರೀಕೃಷ್ಣನ ಮಂಡಲೋತ್ಸವ ಉದ್ಘಾಟಿಸದ ಭಾಗ್ಯಶಾಲಿ ನಾನು ಎಂದರು. ಭಾರತವು ಧಾರ್ಮಿಕ ಅನುಷ್ಠಾನದೊಂದಿಗೆ ಸಾಂಸ್ಕೃತಿಕ ಚೈತನ್ಯ, ಆಧ್ಯಾತ್ಮಿಕ ಪ್ರೇರಣೆ ಹಾಗೂ ಸಾಮಾಜಿಕ ಐಕ್ಯತೆಯ ಪಾವನ ದೇಶ. ಧರ್ಮಕ್ಕೆ ತೊಡಕುಂಟಾದಾಗ ದುಷ್ಟರ ನಾಶಕ್ಕೆ ಮತ್ತೆ ಅವತರಿಸಿ ಬರುತ್ತೇನೆ ಎಂದು ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ. ಆತನು ನಮ್ಮೆಲ್ಲರ ಜೀವನದಲ್ಲಿ ಬಾಲ್ಯ, ಯುವ, ರಾಜನೀತಿ, ಭಕ್ತಿ, ಜ್ಞಾನ, ಕರ್ಮ ಹಾಗೂ ಫಲಾಪೇಕ್ಷೆ ಇಲ್ಲದ ಸೇವೆ ಪ್ರತಿನಿಧಿಸುತ್ತಾನೆ. ಯುವಸಮುದಾಯಕ್ಕೆ ಭಕ್ತಿ, ಕರ್ತವ್ಯಶೀಲ, ವಿವೇಕಶೀಲ ಹಾಗೂ ಕರ್ಮಯೋಗಿಯಾಗಲು ಪ್ರೇರಣೆಯಾಗಿದ್ದಾನೆ. ಮಂಡಲೋತ್ಸವದ ಈ ಸುಸಂದರ್ಭದಲ್ಲಿ ಧರ್ಮವು ನಮ್ಮ ಆಚರಣೆ ಹಾಗೂ ವಿಚಾರದಲ್ಲಿ ಬರುವಂತಾಗಲು ನಾವೆಲ್ಲರೂ ಶ್ರೀಕೃಷ್ಣ ಬೋಧಿಸಿದ ಗೀತೆಯ ಮಾರ್ಗದಲ್ಲಿ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net