

ಬೆಂಗಳೂರು: ಕಾಡಿನಂಚಿನ ಜನರು ವನ್ಯಜಿವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಹಾಗೂ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು ಪ್ರಸ್ತುತ ಕಾಲದ ಅನಿವಾರ್ಯತೆಯಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಅರಣ್ಯ ಇಲಾಖೆ 70ನೇ ವನ್ಯಜಿವಿ ಸಪ್ತಾಹ ಭಾಗವಾಗಿ ಕಬ್ಬನ್ ಪಾರ್ಕ್ನಿಂದ ಲಾಲ್ಬಾಗ್ವರೆಗೆ ಆಯೋಜಿಸಿದ್ದ ಜಾಗೃತಿ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ವನ್ಯಜಿವಿಗಳ ಪಾತ್ರ ಮಹತ್ವಪೂರ್ಣವಾಗಿದೆ. ಕಾಡಿನಲ್ಲಿ ಬೆಳೆಯುವ ಹುಲ್ಲು, ಸೊಪ್ಪನ್ನು ಸಸ್ಯಾಹಾರಿ ಪ್ರಾಣಿಗಳು ತಿನ್ನುತ್ತವೆ, ಈ ಪ್ರಾಣಿಗಳನ್ನು ಮಾಂಸಾಹಾರಿ ಪ್ರಾಣಿಗಳು ಬೇಟೆಯಾಡುತ್ತವೆ. ಹೀಗೆ ಪ್ರಕೃತಿ ಸಮತೋಲನ ಕಾಪಾಡುತ್ತವೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಮನುಷ್ಯರಂತೆ ಬದುಕುವ ಹಕ್ಕಿದೆ. ಆದರೆ ಇಂದು ಹಲವು ವನ್ಯಜಿವಿಗಳು ಅಳಿವಿನಂಚಿನಲ್ಲಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯಜಿವಿಗಳ ಬಗ್ಗೆ ಜಾಗೃತಿ ಮೂಡಿಸಲು ವನ್ಯಜಿವಿ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
ಅರಣ್ಯದಂಚಿನ ಜನರು ವನ್ಯಜಿವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ ಉಳಿಯಲು ಸಾಧ್ಯ. ನಮ್ಮ ಪೂರ್ವಿಕರಿಗೆ ಸಹಬಾಳ್ವೆಯ ಪರಿಚಯವಿತ್ತು. ಆದರೆ ನಾವೀಗ ಆ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ. ಭಾರತವು ಪಶ್ಚಿಮ ಘಟ್ಟ, ಪೂರ್ವಟ್ಟದ ವಿಶಾಲ ಅರಣ್ಯ ಪ್ರದೇಶಗಳನ್ನು ಒಳಗೊಂಡು ಜೈವಿಕ ಪ್ರಭೇದಗಳಿಗೆ ನೆಚ್ಚಿನ ತಾಣವಾಗಿದೆ. ಹಲವಾರು ಪ್ರಾಣಿ ಪ್ರಭೇದಗಳಿಗೆ ಸುರತ ಆವಾಸ ಸ್ಥಾನವಾಗಿದೆ. ಇದನ್ನು ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಕಾಲ್ನಡಿಗೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ಸುಭಾಷ್ ಮಾಲ್ಕಡೆ, ಪರಿಸರ ಪ್ರೇಮಿಗಳು ಇತರರಿದ್ದರು.
ಅರಣ್ಯ ವ್ಯಾಪ್ತಿ ಕ್ಷೀಣಿಸಿದರೆ, ಮಾನವ-ವನ್ಯಜಿವಿ ಸಂರ್ಷ ಹೆಚ್ಚಾಗುತ್ತದೆ. ಇದಕ್ಕೆ ಅರಣ್ಯ ಪ್ರದೇಶ ಒತ್ತುವರಿಯಾಗದಂತೆ ತಡೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. 2015ರ ನಂತರದ ಅರಣ್ಯ ಒತ್ತುವರಿ ತೆರವು ಮಾಡುಸುತ್ತಿದೆ. ಈ ಪೈಕಿ ಪಟ್ಟಾ ಭೂಮಿಯೂ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಒಕ್ಕಲೆಬ್ಬಿಸಬೇಡಿ ಎಂದು ಸೂಚಿಸಿದ್ದೇವೆ. ಆದರೆ ಇದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಪ್ರಚಾರ ಮಾಡಿ ಉದ್ದೇಶ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ದೊಡ್ಡ ಒತ್ತುವರಿಯನ್ನು ನಿರ್ದಾಣ್ಯವಾಗಿ ತೆರವು ಮಾಡಿಸುತ್ತೇವೆ. ಹೊಸ ಒತ್ತುವರಿದಾರರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಚಾರಣ ಪಥಗಳಿಗೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ಆರಂಭವಾಗಲಿದೆ. ರಾಜ್ಯದ ಎಲ್ಲ ಚಾರಣ ಪಥಗಳಿಗೂ ಒಂದೇ ಅಂತರ್ಜಾಲ ತಾಣದಲ್ಲಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೆಬ್ಸೈಟ್ಗೆ ಗುರುವಾರ (ಅ.3) ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಭೂಭಾಗದ ಶೇ.33 ಅರಣ್ಯ ಇರಬೇಕು. ಆದರೆ ರಾಜ್ಯದಲ್ಲಿ ಶೇ.22 ಮಾತ್ರ ಹಸಿರು ಹೊದಿಕೆ ಇದೆ. ಪ್ರಸ್ತುತ ಒತ್ತುವರಿ ಮಾಡಲಾಗಿದ್ದ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವು ಮಾಡಿಸಲಾಗುತ್ತಿದೆ. ಹೊಸದಾಗಿ 10 ಸಾವಿರ ಎಕರೆ ಭೂಮಿಯನ್ನು ಅರಣ್ಯ ಎಂದು ಘೋಷಿಸಲಾಗಿದೆ. ಇದರಿಂದ ರಾಜ್ಯದಲ್ಲಿನ ಅರಣ್ಯ ಪ್ರದೇಶ ವ್ಯಾಪ್ತಿ ಹೆಚ್ಚಳವಾಗುತ್ತಿದೆ.
-ಈಶ್ವರ ಬಿ ಖಂಡ್ರೆ, ಅರಣ್ಯ ಸಚಿವ
ಅರಣ್ಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ನಾವು ಅರಣ್ಯ, ಕಾಡಿನಲ್ಲಿರುವ ಸಂಪತ್ತು ಹಾಗೂ ವನ್ಯಜಿವಿಗಳನ್ನು ಸಂರಕ್ಷಿಸಬೇಕು.
- ರಿಷಬ್ ಶೆಟ್ಟಿ, ನಟ, ನಿರ್ದೇಶಕ