ಕರ್ನಾಟಕ ನೆಚ್ಚಿನ ತಾಣ: ಡಿ.ಕೆ.ಶಿವಕುಮಾರ್ | Investment friendly

DK Shivakumar
Published on

ಬೆಂಗಳೂರು: ಉದ್ಯಮಿಗಳು ತಮ್ಮ ಸಂಪತ್ತು, ಅಂತಸ್ತು, ಉದ್ಯಮದ ಸಾಮರ್ಥ್ಯ ಬೆಳೆಸಲು ಬಯಸುತ್ತಾನೆ. ಅದೇ ರೀತಿ ಹೂಡಿಕೆದಾರರೂ ಲಾಭ ನಿರೀಕ್ಷಿಸುತ್ತಾರೆ. ಇಬ್ಬರಿಗೂ ಕರ್ನಾಟಕ, ಬೆಂಗಳೂರು ಆಕರ್ಷಕ ಮತ್ತು ನೆಚ್ಚಿನ ತಾಣವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾವ ಕಂಪನಿಗಳು ಕರ್ನಾಟಕ, ಬೆಂಗಳೂರಿನಿಂದ ಕಾಲ್ತೆಗೆದಿಲ್ಲ. ಉದ್ಯಮ ಸ್ಥಾಪಿಸಲು, ಹೂಡಿಕೆಗೆ ಹಿಂಜರಿದಿಲ್ಲ ಎಂದು ಬಲವಾಗಿ ಅಲ್ಲಗಳೆದರು.

ಭರಪೂರ ಪ್ರತಿಭಾ ಸಂಪತ್ತು, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಉದ್ಯಮ-ಹೂಡಿಕೆ ಸ್ನೇಹಿ ನೀತಿಗಳು, ಹವಾಗುಣ, ಅಗತ್ಯ ಸವಲತ್ತುಗಳು, ಸ್ಥಿರ ಸರ್ಕಾರ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಈ ಎಲ್ಲ ಕಾರಣಗಳಿಂದ ಬೆಂಗಳೂರು, ಕರ್ನಾಟಕ ಆಕರ್ಷಕ ನೆಲೆಯಾಗಿದೆ.

ದೇಶ-ವಿದೇಶದ ಉದ್ಯಮಗಳು, ಬಂಡವಾಳ ಹೂಡಿಕೆದಾರರಿಗೆ ಬೇಕಾದ ಸವಲತ್ತು ಕಲ್ಪಿಸುವ ಜತೆಗೆ ಪ್ರೋತ್ಸಾಹಕಗಳನ್ನು ಸರ್ಕಾರ ನೀಡುತ್ತಿದೆ. ಕರ್ನಾಟಕ ಸಾಕಷ್ಟು ಕೊಟ್ಟಿದ್ದರಿಂದ ಇಲ್ಲಿಗೆ ಬಂದವರು ಬೆಳೆದು ಜಾಗತಿಕ ಗುರುತಿಸಿಕೊಳ್ಳಲು ಶಕ್ತರಾಗಿದ್ದಾರೆ ಎಂದು ಹೇಳಿದರು.

ಟೀಕಿಸುವುದು ರಾಜ್ಯದ್ರೋಹ

ನಾರಾ ಲೋಕೇಶ್ ಸೇರಿ ಯಾವುದೇ ಉದ್ಯಮಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕರ್ನಾಟಕದಿಂದ ಏನೆಲ್ಲ ಪಡೆದು ಬೆಳೆದವರು ಟೀಕಿಸುವುದು ರಾಜ್ಯಕ್ಕೆ ಬಗೆದ ದ್ರೋಹವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದರು.

ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, ಎರಡು ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರದ ಬೊಕ್ಕಸಕ್ಕೂ ಶೇ.40ರಷ್ಟು ಆದಾಯ ಸಂದಾಯವಾಗುತ್ತದೆ. ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡಿಕೊಳ್ಳಲು ಕೆಲವು ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿ ಅಗತ್ಯ ಸವಲತ್ತು ಸುಧಾರಣೆಗೆ ನಮ್ಮ ಕೈಲಾದಷ್ಟು ನಾವು ಮಾಡುತ್ತಿದ್ದೇವೆ. ಆಂಧ್ರಪ್ರದೇಶಕ್ಕೆ ಉದ್ಯಮಿಗಳು ಹೋದರೆ ಬೇಡವೆನ್ನಲು ಆದೀತೆ ? 12ರಂದು ಸಿಂಗಾಪುರದ ಉದ್ಯಮಿಗಳ ನಿಯೋಗ ಬೆಂಗಳೂರಿಗೆ ಬರುತ್ತಿದ್ದು, ಖಾಸಗಿ ವಿವಿಗಳು, ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಎಐ ಹಬ್ ಕಾರಣ ಬೇರೆ

ಅಂಧ್ರದ ವಿಶಾಖಪಟ್ಟಣಕ್ಕೆ ಒಂದು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಗೂಗಲ್ ಎಐ ಹಬ್ ಹೋಗಿದ್ದಕ್ಕೆ ಬೇರೆ ಕಾರಣವಿದೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸುದ್ದಿಗಾರರಿಗೆ ಬುಧವಾರ ಸಮಜಾಯಿಷಿ ನೀಡಿದರು.

ರಾಜ್ಯದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.22 ಲಕ್ಷ ಕೋಟಿ ರೂ ಹೂಡಿಕೆಗೆ ಒಡಂಬಡಿಕೆಗಳಾಗಿವೆ. ರಸ್ತೆ ಗುಂಡಿ ಮುಚ್ಚಲು ಕಾಲಾವಕಾಶ ಬೇಕಾಗಲಿದ್ದು, ಉದ್ಯಮಿ ಕಿರಣ್ ಮಜುಂದಾರ್ ಷಾ ಟೀಕೆ ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net