

ಕೋಲಾರ: ಮತಎಣಿಕೆಯ ಮಧ್ಯೆಯೇ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಕೈಹಾಕಿದ್ದು, ಮಾಲೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ಗೆ ಗಾಳ ಹಾಕಿದೆ.
ಹೂಡಿ ವಿಜಯಕುಮಾರ್ ಅವರು ಮಾಲೂರು ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಕೈ ಮುಖಂಡರು ವಿಜಯಕುಮಾರ್ ಸಂಪರ್ಕಕ್ಕೆ ಯತ್ನಿಸಿದ್ದಾರೆ. ಇತ್ತ ಗೆಲುವಿನ ನಿರೀಕ್ಷೆಯಲ್ಲಿರುವ ವಿಜಯಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಮುಳಬಾಗಿಲಿನ ಕುರುಡುಮಲೆಯ ವಿನಾಯಕ ದೇವರ ದರ್ಶನ ಪಡೆಯುತ್ತಿದ್ದಾರೆ.
ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, ಪಕ್ಷೇತರರನ್ನು ಜೊತೆಗೆ ಸೇರಿಸಿಕೊಂಡು ಸುಭದ್ರ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಗೆಲುವು ಸಾಧಿಸಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಕೈ ಗಾಳಹಾಕಿದೆ.
ಕುದುರೆ ವ್ಯಾಪಾರದ ಭೀತಿಯಿಂದ ಗೆಲ್ಲುವ ಅಭ್ಯರ್ಥಿಗಳನ್ನು ಇಂದು ಸಂಜೆ ವೇಳೆ ಬೇರೆ ರಾಜ್ಯಗಳ ಹೋಟೆಲ್ಗೆ ಸ್ಥಳಾಂತರ ಮಾಡಲು ಕಾಂಗ್ರೆಸ್ ಮುಂದಾಗಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕರೆತರುವ ಜವಬ್ದಾರಿಯನ್ನು ಕೆಪಿಸಿಸಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಇಂದು ಸಂಜೆಯೊಳಗೆ ಎಲ್ಲರನ್ನು ಕರೆತಂದು ರಾಜಸ್ಥಾನ, ಛತ್ತೀಸಗಢ, ತಮಿಳುನಾಡಿನ ಹೋಟೆಲ್ಗಳಲ್ಲಿ ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.
ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 118 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 72 ಮತ್ತು ಜೆಡಿಎಸ್ 27 ಹಾಗೂ ಇತರೆ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲು 113 ಸ್ಥಾನಗಳ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.