ಸಾವಿರ ಗಡಿ ದಾಟಿದ ಸೋಂಕಿತರು, 20 ದಿನದಲ್ಲಿ ಪೀಡಿತರ ಸಂಖ್ಯೆ 500ರಿಂದ 1000ಕ್ಕೆ

page 6 1
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1000 ಗಡಿ ದಾಟಿತು ಎಂಬ ಆತಂಕ ಮೂಡಿಸಿದರೂ, ಶೂನ್ಯದಿಂದ ಈ ಸಂಖ್ಯೆ ತಲುಪುವಲ್ಲಿ ದೇಶದಲ್ಲೇ ಅತ್ಯಂತ ನಿಧಾನಗತಿ ಕಾಯ್ದುಕೊಂಡಿರುವುದು ತುಸು ಸಮಾಧಾನದ ಸಂಗತಿ.

ಶೂನ್ಯದಿಂದ 500ರವರೆಗೆ ತಲುಪಿದ 11 ರಾಜ್ಯಗಳಲ್ಲಿ ನಿಧಾನಗತಿ(47 ದಿನ) ಕಾಯ್ದುಕೊಂಡಿದ್ದ ಕರ್ನಾಟಕ, ಇದೀಗ 500ರಿಂದ 1000 ತಲುಪಲು 20 ದಿನ ತೆಗೆದುಕೊಂಡಿದೆ. ಸದ್ಯ ದೇಶದಲ್ಲಿ ನಿಧಾನಗತಿಯಲ್ಲಿ 1000 ಸೋಂಕಿತರ ಸಂಖ್ಯೆ ದಾಟಿದ 13 ರಾಜ್ಯಗಳಲ್ಲಿ ಕರ್ನಾಟಕ ಕೊನೇ ಸ್ಥಾನದಲ್ಲಿದೆ.

ಒಂದು ಸಾವು, 66 ಹೊಸ ಕೇಸ್: ಬೀದರ್ ಜಿಲ್ಲೆಯಲ್ಲಿ 52 ವರ್ಷದ ವ್ಯಕ್ತಿ ಮೃತಪಡುವ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಶುಕ್ರವಾರ 66 ಹೊಸ ಪ್ರಕರಣ ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 1056ಕ್ಕೆ ತಲುಪಿದೆ. ದಕ್ಷಿಣ ಕನ್ನಡ 15, ಮಂಡ್ಯ 13, ಬೆಂಗಳೂರು 11, ಹಾಸನ ಮತ್ತು ಬೀದರ್ ತಲಾ 7, ಉಡುಪಿ 5, ಕಲಬುರಗಿ 3, ಚಿತ್ರದುರ್ಗ 2, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.

25 ಜಿಲ್ಲೆಗಳಿಗೆ ಸೋಂಕು: ಒಂದೇ ದಿನ 11 ಜಿಲ್ಲೆಗಳಲ್ಲಿ ಸೋಂಕು ವರದಿಯಾಗಿದೆ. ಲಾಕ್​ಡೌನ್ ಸಡಿಲಿಕೆ ನಂತರ ಹಸಿರು ವಲಯದಲ್ಲಿದ್ದ ನಾಲ್ಕು ಜಿಲ್ಲೆಗಳಿಗೆ ಸೋಂಕು ಹರಡಿದ್ದು, 25 ಜಿಲ್ಲೆಗಳನ್ನು ವ್ಯಾಪಿಸಿದೆ. ಇದರಿಂದಾಗಿ ಹಸಿರು ವಲಯದಲ್ಲಿರುವ ಉಳಿದ ಐದು ಜಿಲ್ಲೆಗಳಿಗೂ ಭೀತಿ ಆವರಿಸಿದೆ.

ಬೀದರ್​ನಲ್ಲಿ ಮತ್ತೊಂದು ಸಾವು: ಬೀದರ್ ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದು ವರಿದಿದೆ. ಶುಕ್ರವಾರ ಮತ್ತೆ 7 ಪಾಸಿಟಿವ್ ಪ್ರಕರಣ ಪತ್ತೆ ಯಾಗಿದ್ದು, ಮಹಾಮಾರಿಗೆ ಇನ್ನೊಬ್ಬ ಬಲಿಯಾಗಿದ್ದಾನೆ. 52 ವರ್ಷದ ಚಿಟಗುಪ್ಪದ ವ್ಯಕ್ತಿ ಮೇ 12ರಂದು ಬ್ರಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಶುಕ್ರವಾರ ವರದಿ

ಪಾಸಿಟಿವ್ ಬಂದಿದೆ. ಮಾ.9ಕ್ಕೆ ಮೊದಲ ಕೇಸ್: ರಾಜ್ಯದಲ್ಲಿ ಮಾ. 9ಕ್ಕೆ ಮೊದಲ ಪ್ರಕರಣ ದಾಖಲಾಗಿ ಮಾ.31ಕ್ಕೆ ಅಂದರೆ 22 ದಿನದಲ್ಲಿ ಶತಕ ತಲುಪಿತ್ತು. ನಂತರ ಏಪ್ರಿಲ್ 25ಕ್ಕೆ 500 ಗಡಿ ಮುಟ್ಟಿತ್ತು. ಇದೀಗ 20 ದಿನದ ಅವಧಿಯಲ್ಲಿ 1056 ಸೋಂಕಿತರು ಪತ್ತೆಯಾಗಿದ್ದಾರೆ. 500ರಿಂದ 1000 ತಲುಪಲು ಮಹಾರಾಷ್ಟ್ರ, ಪಂಜಾಬ್ ಕೇವಲ 2 ದಿನ ತೆಗೆದುಕೊಂಡಿದ್ದರೆ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ 4 ದಿನದಲ್ಲಿ ಗಡಿ ದಾಟಿದ್ದವು. ಉತ್ತರ ಪ್ರದೇಶ 5 ದಿನಕ್ಕೆ, ತಮಿಳುನಾಡು, ದೆಹಲಿ 7 ದಿನಕ್ಕೆ, ಆಂಧ್ರ ಪ್ರದೇಶ 10 ದಿನಕ್ಕೆ, ಪಶ್ಚಿಮ ಬಂಗಾಳ ಹಾಗೂ ಬಿಹಾರ 11 ದಿನಕ್ಕೆ ಹಾಗೂ ತೆಲಂಗಾಣದಲ್ಲಿ 500ರಿಂದ 1000ಕ್ಕೆ ತಲುಪಲು 16 ದಿನ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net