

ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ಇಂದು ಒಟ್ಟು 1,990 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,76,587ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 45 ಸೋಂಕಿತರು ಕೊನೆಯುಸಿರೆಳೆದಿದ್ದು, ಒಟ್ಟಾರೆ ಮೃತರ ಸಂಖ್ಯೆ 35,989ಕ್ಕೆ ಏರಿಕೆಯಾಗಿದೆ.
ಇಂದು 2,537 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ ಗುಣಮುಖರ ಸಂಖ್ಯೆ 28,06,933ಕ್ಕೆ ಹೆಚ್ಚಿದೆ. ಸದ್ಯ 33,642 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.59ರಷ್ಟಿದ್ದರೆ ಮರಣ ಪ್ರಮಾಣ ಶೇ. 2.26ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 400 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 219, ಮೈಸೂರು 211, ಹಾಸನ 175, ಬೆಳಗಾವಿ 140 ಮತ್ತು ಉತ್ತರ ಕನ್ನಡದಲ್ಲಿ 120 ಪ್ರಕರಣಗಳು ಕಾಣಿಸಿಕೊಂಡಿವೆ. ಯಾದಗಿರಿಯಲ್ಲಿ ಸತತ ಎರಡನೇ ದಿನವೂ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ, ಬೀದರ್, ಚಿತ್ರದುರ್ಗ, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಹೊಸ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರಿನಲ್ಲಿಂದು 490 ಸೋಂಕಿತರು ಗುಣಮುಖರಾಗಿದ್ದು, 15,761 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. (ಏಜೆನ್ಸೀಸ್)