

ಬೆಂಗಳೂರು: ವಿಧಾನಸೌಧದಲ್ಲಿ ಇಂದು ರಾಜ್ಯಪಾಲರ ಭಾಷಣದ ನಡುವೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು. ವಿಪಕ್ಷ ನಾಯಕನಾಗಿ ಸರ್ಕಾರ ಟೀಕಿಸಬೇಕೆಂದು ಟೀಕಿಸುತ್ತಿಲ್ಲ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಚುನಾವಣೆ ವೇಳೆ ಜನರಿಗೆ ಕೊಟ್ಟ ಆಶ್ವಾಸನೆ, ಭರವಸೆ ಯಾವ ರೀತಿ ಈಡೇರಿಸಲು ಹೊರಟ್ಟಿದ್ದೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು ರಾಜ್ಯಪಾಲರ ಭಾಷಣ ನೋಡಿದರೆ ಸರ್ಕಾರ ಐಸಿಯುಗೆ ಹೋಗುವ ಕಾಲ ಬರಲಿದೆ ಅನಿಸುತ್ತಿದೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯಬಹುದು. ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಲಿದೆ. ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಸರ್ಕಾರದ ಮುಂದಿನ ಆಶಯಗಳ ಬಗ್ಗೆ ರಾಜ್ಯಪಾಲರು ಭಾಷಣ ಮಾಡುವಾಗ ಆಡಳಿತ ಪಕ್ಷದ ಯಾವ ಶಾಸಕರು ಮೇಜು ಕುಟ್ಟಿದ್ದು ನೋಡಿಲ್ಲ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಿ, ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೊರಟಿದ್ದಾರೆ. ಈ ಬೆಂಗಳೂರು ಕುಲಗೆಡಿಸಿದವರು ಯಾರು?. ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಗಳೂರು ಕುಲಗೆಡಿಸಿದ್ದಾರೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.
ಈ ಸರ್ಕಾರದಲ್ಲಿ ಸಿಂಡಿಕೇಟ್ಗಳಿವೆ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ, ಸಾರಿಗೆ ಇಲಾಖೆ ವರ್ಗಾವಣೆಯಲ್ಲೂ ಒಂದು ಸಿಂಡಿಕೇಟ್ ಇದೆ. ಮೊದಲ ಬಾರಿಗೆ ಕಮರ್ಷಿಯಲ್ ಇಲಾಖೆಯಲ್ಲೂ ಸಿಂಡಿಕೇಟ್ ಶುರುವಾಗಿದೆ. ಅದಕ್ಕೆ ವೈಎಸ್ಟಿ ಇದೆ ಎಂದು ಹೇಳಿದ್ದೆ. ಸಿಂಡಿಕೇಟ್ಗಳು ವರ್ಗಾವಣೆ ದಂಧೆ ಮಾಡುತ್ತಾರೆ. ಇವರು ಸರ್ಕಾರದ ಮುಂದೆ ತೆಗೆದುಕೊಂಡು ಹೋಗುತ್ತಾರೆ ಎಂದು ಕುಮಾರ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸಿಂಡಿಕೇಟ್ನವರು ರೇಟ್ ಫಿಕ್ಸ್ ಮಾಡಿ ಸರ್ಕಾರಕ್ಕೆ ಕಳುಹಿಸುತ್ತಾರೆ. ಸರ್ಕಾರ ಸಹಿ ಮಾಡುತ್ತದೆ. ಮೈತ್ರಿ ಅವಧಿಯಲ್ಲಿ ಅಂದರೆ ನನ್ನ ಕಾಲದಲ್ಲೂ ಈ ಸಿಂಡಿಕೇಟ್ ಇತ್ತು. ನನಗೆ ಸರಿಯಾಗಿ ಕೆಲಸ ಮಾಡಲು ಬಿಡಲಿಲ್ಲ. ಐಎಎಸ್, ಇಂಜಿನಿಯರ್ ವರ್ಗಾವಣೆ ಮಾಡುವ ಹಾಗಿರಲಿಲ್ಲ. ಅವರು ಹೇಳಿದ ಹಾಗೆ ವರ್ಗಾವಣೆ ಮಾಡಬೇಕಿತ್ತು. ಈ ಎಲ್ಲವನ್ನೂ ನಾಳೆ ಸದನದಲ್ಲಿ ಮಾತನಾಡುತ್ತೇನೆ ಎಂದರು.
ಸಿಎಂ ಕಚೇರಿ ಕೃಷ್ಣದಲ್ಲಿ ಶಾಸಕರ ಶಿಫಾರಸ್ಸಿನ ಪತ್ರಕ್ಕೆ ಬೆಲೆ ಇಲ್ಲದಂತಾಗಿದೆ. ಶಾಸಕರು ಶಿಫಾರಸ್ಸಿನ ಪತ್ರ ತಂದರೆ, ಪತ್ರದಿಂದ ಏನೂ ಆಗುವುದಿಲ್ಲ. 30 ಲಕ್ಷ ಲಂಚ ತೆಗೆದುಕೊಂಡು ಬರಬೇಕೆಂದು ಹೇಳುತ್ತಾರೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.