ಕರ್ಣ ಚೈತನ್ಯದ ಸೂಪರ್ ಬ್ರೇನ್ ಯೋಗ ಪರಿಣಾಮಕಾರಿ ಕ್ರಮ

-683898c0e2107
Published on
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಅಂಗ ಚಟುವಟಿಕೆಗೆ ಆಧ್ಯಾತ್ಮಿಕವೂ ವೈಜ್ಞಾನಿಕವೂ ಆದ ಮಹತ್ವವಿದೆ. ‘ಕರ್ಣವೇಧ’ ಎಂಬುದು ಮಾತ್ರವಲ್ಲದೆ, ‘ಕರ್ಣ ಚೈತನ್ಯ ಮಾಲಾ ಕ್ರಿಯೆ’ ಕೂಡ ನಮ್ಮ ದೈನಂದಿನ ಆರೋಗ್ಯದ ಪರಿಪೋಷಣೆಯ ಒಂದು ಸೂಕ್ಷ್ಮ ತಂತ್ರವಾಗಿದೆ. ಈ ಸಿದ್ಧ ತಂತ್ರವನ್ನು ಆಧುನಿಕ ಯೋಗ ವಿಜ್ಞಾನವು ‘ಸೂಪರ್ ಬ್ರೇನ್ ಯೋಗ’ ಎಂದು ಗುರುತಿಸಿದೆ. ಮಿದುಳಿನಶಕ್ತಿ. ಏಕಾಗ್ರತೆ, ಸ್ಮರಣೆ, ಬುದ್ದಿಮತ್ತೆ ಮತ್ತು ಸೃಜನ ಶೀಲತೆಯನ್ನು ವೃದ್ಧಿಸಲು ಇದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಬಹಳ ಸರಳ ಆದರೆ ಅತಿಶಯ ಪರಿಣಾಮಕಾರಿ ತಂತ್ರವಾಗಿದೆ.

‘ಸರ್ವೆಂದ್ರಿಯಾಣಾಂ ನಯನಂ ಪ್ರಧಾನಂ’ ಎಂದು ಕಣ್ಣಿನ ಕುರಿತು ಶಾಸ್ತ್ರ ಹೇಳುತ್ತದೆ. ಅದೇ ರೀತಿ, ಕಿವಿಗಳು ಕೂಡ ಮರ್ಮ ಬಿಂದುಗಳ ಆಶ್ರಯವಾಗಿವೆ. ಭಾರತೀಯ ದರ್ಶನಗಳಲ್ಲಿ ಕಿವಿಗಳನ್ನು ‘ಜ್ಞಾನೇಂದ್ರಿಯ ದ್ವಾರ’ ಎಂದು ಗುರುತಿಸಲಾಗಿದೆ. ಕರ್ಣವೇಧ ಅಥವಾ ಕರ್ಣಚೈತನ್ಯ ಮಾಲಾಕ್ರಿಯೆ ದ್ವಾರಾ ಈ ದ್ವಾರವನ್ನು ಶುದ್ಧಪಡಿಸಿ ಮಿದುಳಿಗೆ ಚೈತನ್ಯ ಶಕ್ತಿ ಜಾಗೃತಗೊಳಿಸುತ್ತವೆ. ಆಧ್ಯಾತ್ಮ ಜ್ಞಾನಪ್ರಾಪ್ತಿಯ ಮೊದಲ ಹೆಜ್ಜೆ ಶ್ರವಣ’ ಎಂದು ಉಪನಿಷತ್ತು ಸಾರಿವೆ.

ಕರ್ಣ ಪಥೇ ಶ್ರುತಿಂ ಲಭ್ಯಾ ಪ್ರಜ್ಞಾ ಪುಷ್ಟಿಂ ಲಭೇನ್ನಶಃ|

ಗೃಹೀತವಾನ್ ಕರ್ಣಯುಗಂ ಚೈತನ್ಯಾಂ ಬೋಧಯೇತ್ಸ ಯಮ್ ||

ಅರ್ಥ: ಕಿವಿಪಥದಿಂದ ಶ್ರವಣವನ್ನು ಪಡೆದು ಮಾನವನು ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾನೆ. ಕರ್ಣಗಳನ್ನು ಹಿಡಿದಾಗ ಆತ್ಮ ಚೈತನ್ಯ ಬೆಳೆಯುತ್ತದೆ.

ಮಹತ್ವ ಮತ್ತು ಶಕ್ತಿಯ ತತ್ತ್ವ: ಕಿವಿ-ಮರ್ಮ ಬಿಂದುಗಳು: ಕಿವಿಗಳಲ್ಲಿರುವ ಸೂಕ್ಷ್ಮ ಮರ್ಮ ಬಿಂದುಗಳು ಮಿದುಳಿನ ವಿವಿಧ ಕೇಂದ್ರಗಳಿಗೆ ನೇರ ಸಂಪರ್ಕ ಹೊಂದಿವೆ. ಇವುಮಿದುಳಿನ ಚೇತನ ಶಕ್ತಿಯನ್ನು ಪ್ರಜ್ವಲಿತಗೊಳಿಸುತ್ತದೆ.

ಬಲ ಮತ್ತು ಎಡ ಮಿದುಳಿನ ಸಮತೋಲನ: ಬಲಗೈಯಿಂದ ಎಡಕಿವಿ ಮತ್ತು ಎಡಗೈಯಿಂದ ಬಲಕಿವಿಯನ್ನು ಹಿಡಿಯುವ ಮೂಲಕ ಬಲ ಮತ್ತು ಎಡ ಮಸ್ತಿಷ್ಕ ಭಾಗಗಳ ಸಕ್ರಿಯತೆ ಸಮನ್ವಯ ಗೊಳ್ಳುತ್ತದೆ.

ಆಧ್ಯಾತ್ಮಿಕ ಶುದ್ಧೀಕರಣ: ಶ್ರದ್ಧಾಪೂರ್ವಕ ನಮಸ್ಕಾರ. ಪ್ರವರ ಉಚ್ಛಾರಣೆಗಳೊಂದಿಗೆ ಮನಸ್ಸು ಶುದ್ಧಗೊಳ್ಳುತ್ತದೆ. ಹೃದಯದಲ್ಲಿ ಕೃತಜ್ಞತೆ ಮತ್ತು ವಿನಯ ಬೆಳೆಸಿ ಕೊಳ್ಳುತ್ತದೆ. ಭಾರತೀಯ ಋಷಿಗಳು ಮತ್ತು ಗುರು ಪರಂಪರೆಗಳಲ್ಲಿ ನಿತ್ಯ ಉಪಯೋಗ.

ಜಗತ್ತಿನಲ್ಲಿ ಸೂಪರ್ ಬ್ರೖೆನ್ ಯೋಗದ ವ್ಯಾಪ್ತಿ: ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಅಮೆರಿಕ ಶಾಲೆಗಳಲ್ಲಿ ಮಕ್ಕಳ ಏಕಾಗ್ರತೆಗೆ ಶಿಫಾರಸ್ಸು ಮಾಡಲಾಗಿದೆ ಯೂರೋಪಿನ ಉನ್ನತ ವಿದ್ಯಾಸಂಸ್ಥೆ ಗಳ ಅಧ್ಯಯನಗಳಲ್ಲಿ ಮಾನ್ಯತೆ ಯೋಗ ಕ್ಷೇತ್ರದಲ್ಲಿ ವಿಶೇಷ ತರಬೇತಿಗಳ ಭಾಗ. ಮಿದುಳಿನ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಧ್ಯಯನ ಕೇಂದ್ರಗಳಲ್ಲಿ ಇದು ಉಪಯೋಗಿಸಲಾಗುತ್ತಿದೆ.

ಸೂಪರ್ ಬ್ರೇನ್ ಯೋಗದ ವಿಧಾನ: ನೇರವಾಗಿ ನಿಂತು ಕೊಳ್ಳಿ. ಕತ್ತು ಮತ್ತು ಬೆನ್ನು ನೇರವಾಗಿರಲಿ. ಎರಡೂ ಕಿವಿಗಳನ್ನು ತೋರು-ಹೆಬ್ಬೆರಳುಗಳಿಂದ ಕಿವಿಗಳ ಅಂಚು ಹಾಗೂ ಒಳಕಿವಿಪದರ ವನ್ನು ಹೊರ-ಕೆಳಮುಖವಾಗಿ ಎಳೆಯುವುದು ಹಾಗೂ ಪ್ರಚೋದಿಸುವುದು. ಬಲಗೈಯಿಂದ ಎಡಗಿವಿಯನ್ನು ಎಡಗೈಯಿಂದ ಬಲಗಿವಿಯನ್ನು ಹಿಡಿಯಿರಿ. ನಾಲಿಗೆಯನ್ನು ಬಾಯಿಯ ಮೇಲ್ಬಾಗಕ್ಕೆ ಒತ್ತಿ ಹಿಡಿಯಿರಿ. ‘ಓಂ ಶ್ರೀ ಗುರುಭ್ಯೋನಮಃ’ ಎಂಬ ಮಂತ್ರದೊಂದಿಗೆ ಬಸ್ಕಿ ಹೊಡೆಯಬೇಕು.

ಉಸಿರಾಟ ಸಮನ್ವಯ: ಕುಳಿತುಕೊಳ್ಳುವಾಗ ಉಸಿರನ್ನು ಒಳಗೆಳೆದು, ಎದ್ದು ನಿಲ್ಲುವಾಗ ಉಸಿರನ್ನು ಬಿಡಿ. ಈ ಯೋಗ ವ್ಯಾಯಾಮವನ್ನು 14ರಿಂದ 21 ಬಾರಿ ಪುನರಾವರ್ತಿಸಿ.

ಪ್ರಯೋಜನಗಳು: ಸ್ಮರಣಶಕ್ತಿ, ಏಕಾಗ್ರತೆ, ಬುದ್ದಿಮತ್ತೆ ಮತ್ತು ಸೃಜನಶೀಲತೆ ಉತ್ತೇಜಿಸುತ್ತದೆ. ಮಸ್ತಿಷ್ಕದ ಚುರುಕುತನ ಹೆಚ್ಚಿಸಿ ವೃದ್ದಾಪ್ಯ ಸಂಬಂಧಿತ ನೆನಪಿನ ಸಮಸ್ಯೆಗಳನ್ನು ತಡೆಯುತ್ತದೆ. ಮನೋಶಾಂತಿ ಮತ್ತು ಆತ್ಮಸ್ಥಿತಿಯನ್ನು ಉಂಟುಮಾಡುತ್ತದೆ. ಶ್ರದ್ಧೆ, ಶಿಸ್ತು, ಗೌರವವನ್ನು ಬೆಳೆಸುತ್ತದೆ.

ನಮ್ಮ ಶ್ರೇಷ್ಠ ಸಂಸ್ಕೃತಿಯಲ್ಲಿ ಪ್ರತಿಯೊಂದು ಕ್ರಿಯೆಯೂ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಶಕ್ತಿ ಹೊಂದಿದೆ. ಅತ್ಯಂತ ಸರಳವಾದ, ಆದರೆ ಪವಿತ್ರವಾದ ತಂತ್ರವಾಗಿದೆ. ಪ್ರತಿದಿನ ಮುಂಜಾನೆ ಈ ಕ್ರಿಯೆ ಮಾಡುವುದರಿಂದ ಮಿದುಳಿನ ಶಕ್ತಿ, ಸಕಾರಾತ್ಮಕ ಚಿಂತನೆ, ಜೀವನಶಕ್ತಿ ಹೆಚ್ಚಿಸಲು ಸಾಧ್ಯ. ಇದು ನಮ್ಮ ಪುರಾತನ ಋಷಿಮುನಿಗಳ ಬಳವಳಿಯಾಗಿದ್ದು, ಆಧುನಿಕ ವಿಜ್ಞಾನ-ಸಂಶೋಧನೆಯಿಂದ ದೃಢೀಕರಿಸಲಾಗಿದೆ. ಪ್ರತಿದಿನ ಕರ್ಣಚೈತನ್ಯದ ಸೂಪರ್ ಬ್ರೇನ್ ಯೋಗವನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಜೀವನವನ್ನು ಬೆಳಗಿಸೋಣ.(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net