

ಶಿವಮೊಗ್ಗ: ಕಾರ್ಗಿಲ್ ಯುದ್ಧದ ಫಲಿತಾಂಶ ನಮ್ಮ ದೇಶ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿತ್ತು. ಆದರೆ ಈ ಯುದ್ಧ ಭವಿಷ್ಯದಲ್ಲಿ ಭಾರತಕ್ಕೆ ಪಾಠವಾಗಬೇಕು ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಅಂಗವಾಗಿ ಯುವಾ ಬ್ರಿಗೇಡ್‌ನಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕಾರ್ಗಿಲ್ ಯುದ್ಧದ ಆರಂಭದಲ್ಲಿ ನಮ್ಮ ದೇಶದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಟೈಗರ್‌ಹಿಲ್ ಭಾಗದಲ್ಲಿ ಕೆಲವು ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ. ಅವರನ್ನು ಎರಡು ದಿನದಲ್ಲಿ ಹೊರಹಾಕಲಾಗುವುದು ಎಂದಿದ್ದರು. ಆದರೆ ಆ ಯುದ್ಧ ಎರಡು ತಿಂಗಳ ಕಾಲ ನಡೆಯಿತು ಎಂದರು.
ಯುದ್ಧ ಗೆಲ್ಲುವುದಕ್ಕೆ ಮದ್ದು ಗುಂಡುಗಳಿಗಿಂತಲೂ ಸೈನಿಕರ ಶೌರ್ಯ, ಆತ್ಮವಿಶ್ವಾಸ ಮುಖ್ಯ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ, ಸಾಹಗಳ ಕಾರಣದಿಂದ ಈ ದೇಶ ಎಂದಿಗೂ ಅವರನ್ನು ಸ್ಮರಿಸುತ್ತದೆ. ಕಾರ್ಗಿಲ್ ಯುದ್ಧದ ಬಗ್ಗೆ, ನಮ್ಮ ಸೈನಿಕರ ಸಾಹಸದ ಬಗ್ಗೆ ಮಾತನಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಭಾರತದ ಮೂರು ದಿಕ್ಕಿನಿಂದ ಸಮುದ್ರ ಆವರಿಸಿಕೊಂಡಿದೆ. ಇದು ದೇಶಕ್ಕೆ ಶತ್ರುಗಳಿಂದ ರಕ್ಷಣೆ ನೀಡುತ್ತಿದೆ. ಉತ್ತರದಲ್ಲಿ ಹಿಮಾಲಯದ ರಕ್ಷಣೆಯಿದೆ. ನಮ್ಮ ದೇಶ ಹಲವಾರು ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಇದರ ಒಟ್ಟು ವಿಸ್ತೀರ್ಣ ಸುಮಾರು 14 ಸಾವಿರ ಕಿಮೀ. ಇಷ್ಟು ದೀರ್ಘವಾದ ಗಡಿಯನ್ನು ನಮ್ಮ ಸೈನಿಕರು ವರ್ಷವಿಡೀ ಕಾಯುವುದು ಸಣ್ಣ ಮಾತಲ್ಲ ಎಂದು ಅಭಿಪ್ರಾಯಪಟ್ಟರು.
ಉತ್ತರ ಭಾರತದಲ್ಲಿ ಸಮತಟ್ಟು ಪ್ರದೇಶಗಳೇ ಹೆಚ್ಚು. ಹೀಗಾಗಿ ಶತ್ರುಗಳು ಅಲ್ಲಿ ದಾಳಿ ನಡೆಸುವ ಸಂದರ್ಭಗಳೇ ಹೆಚ್ಚು. ಉತ್ತರದಲ್ಲಿ ಹಿಮಾಲಯದ ಕಾರಣದಿಂದ ಚೀನಾ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿರೋಧ ತೋರುವುದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಡಿ.ಮಾಲತೇಶಪ್ಪ ಅವರನ್ನು ಸನ್ಮಾನಿಸಲಾಯಿತು.