ಮೈಸೂರಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

kargil vijay diwas 3
Published on

ಮೈಸೂರು: ಮೈಸೂರು ಎಕ್ಸ್ ಸರ್ವಿಸ್‌ಮೆನ್ ಮೂವ್‌ಮೆಂಟ್ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಗಿಲ್ ಹುತಾತ್ಮರಾದ ಕ್ಯಾಪ್ಟನ್ ವಿಕ್ರಂ ಬಾತ್ರಾ, ಲೆಫ್ಟಿನೆಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಸೌರಭ್ ಕಾಲಿಯ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು, ದೊಡ್ಡ ಗಡಿಯಾರ, ಗಾಂಧಿ ವೃತ್ತ, ದೇವರಾಜ ಅರಸ್ ರಸ್ತೆ ಮೂಲಕ ಸಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಮುಕ್ತಾಯಗೊಂಡಿತು. ಪಾದಯಾತ್ರೆಯಲ್ಲಿ ಮಾಜಿ ಸೈನಿಕರು, ಎನ್‌ಸಿಸಿ ವಿದ್ಯಾರ್ಥಿಗಳು, ಸೈನಿಕ್ ಅಕಾಡೆಮಿಯ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ನಾವು ಇಲ್ಲಿ ಸುರಕ್ಷಿತವಾಗಿ ಇರುವುದಕ್ಕೆ ಗಡಿಯಲ್ಲಿರುವ ನಮ್ಮ ಸೈನಿಕರೇ ಕಾರಣ. ಹಾಗಾಗಿ ದೇಶದ ಗಡಿ ಕಾಯುತ್ತಿರುವ ಯೋಧರು ಹಾಗೂ ಹುತಾತ್ಮರಾಧ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.

ಮೈಸೂರು ಎಕ್ಸ್ ಸರ್ವಿಸ್‌ಮೆನ್ ಮೂವ್‌ಮೆಂಟ್ ಸಂಸ್ಥಾಪಕ ವಿ.ಮಹೇಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ರಾಗಿ ರುವ 527 ಮಾಣಿಕ್ಯಗಳನ್ನು ಪ್ರತಿದಿನ ನಾವುಗಳು ಸ್ಮರಿಸಬೇಕು. ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿತು. ವೀರಯೋಧರ ತ್ಯಾಗದ ಫಲವಾಗಿ ಕಾರ್ಗಿಲ್‌ನಲ್ಲಿ ದೇಶಕ್ಕೆ ಗೆಲುವು ದೊರೆಯಿತು ಎಂದು ಹೇಳಿದರು.

ನಿವೃತ್ತ ಕಾರ್ನಲ್ ಮಹೇಂದ್ರ ಸಿಂಗ್ ಕಾರ್ಗಿಲ್ ಯುದ್ಧದ ಬಗ್ಗೆ ತಿಳಿಸಿದರು. ನಗರ ಪಾಲಿಕೆ ಉಪ ಆಯುಕ್ತ ಮಂಜುನಾಥ್ ರೆಡ್ಡಿ, ಮಣಿಪಾಲ ಆಸ್ಪತ್ರೆಯ ವೈದ್ಯ ಡಾ.ಸುಮಿತ್, ಮೈಸೂರು ಎಕ್ಸ್ ಸರ್ವಿಸ್‌ಮೆನ್ ಮೂವ್‌ಮೆಂಟ್ ಉಪಾಧ್ಯಕ್ಷ ವಿವೇಕಾನಂದ, ಪ್ರಧಾನ ಕಾರ್ಯದರ್ಶಿ ಶ್ರೀಧರ್, ನಿರ್ದೇಶಕರಾದ ಕಿಶೋರ್ ಕದಂ, ವಿಶ್ವನಾಥ್, ಲೋಕೇಶ್, ಧನಂಜಯ, ಸುರೇಶ್, ರಾಮನಾರಾಯಣ, ಮೋಹನ್, ಮಹದೇವ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net