

ಶಿವಮೊಗ್ಗ: ದೇಶದ ಭದ್ರತೆಯ ಪ್ರಶ್ನೆ ಎದುರಾಗುವ ಎಲ್ಲ ಹಂತದಲ್ಲೂ ನಾವು ಸೈನಿಕರೊಂದಿಗೆ ಸೈನಿಕರಾಗಿ, ವೀರಸೇನಾನಿಗಳಂತೆ ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಸೈನಿಕ ಉದ್ಯಾನದಲ್ಲಿ ಸೈನಿಕ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ನೆಹರೂ ಸ್ಟೇಡಿಯಂ ಗೆಳೆಯರ ಬಳಗದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಭಾಗವಹಿಸಿ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದರು.
ದೇಶ ಮತ್ತು ದೇಶವಾಸಿಗಳ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಹಾಗೂ 26ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಚರಿಸಲಾಗುವ ಈ ಸಂಭ್ರಮ ದೇಶಾಭಿಮಾನ, ಸೈನಿಕರ ಗೌರವದ ಸಂಕೇತವಾಗಿದೆ. ಸೈನಿಕರು, ಮಾಜಿ ಸೈನಿಕರು, ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ, ದೇಶದ ಪ್ರತಿ ನಾಗರಿಕರಿಗೂ ದೇಶಪ್ರೇಮ ಜಾಗೃತಿಗೊಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ನಮ್ಮ ವೀರಯೋಧರು ಪ್ರಾಣಾರ್ಪಣೆ ಮಾಡಿರುವುದು ನೋವನ್ನುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ದೇಶದ ಪ್ರತಿ ನಾಗರಿಕರೂ ಹುತಾತ್ಮರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಪ್ರಮಾಣ ಕೈಗೊಳ್ಳಬೇಕು. ಈ ಕಾರ್ಯಕ್ರಮವು ಸಶಸ್ತ್ರ ಪಡೆಗಳ ನಿರಂತರ ಧೈರ್ಯ ಮತ್ತು ಸಮರ್ಪಣೆ, ರಾಷ್ಟ್ರೀಯ ಒಗ್ಗಟ್ಟು, ಸೇವೆ ಮತ್ತು ಶಾಂತಿಯ ಮೌಲ್ಯಗಳು ಮತ್ತು ಭಾರತವನ್ನು ಸುರಕ್ಷಿತವಾಗಿಡುವ ನಿಜ ಜೀವನದ ವೀರರನ್ನು ನೆನಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಯುವ ಮನಸ್ಸುಗಳಲ್ಲಿ ದೇಶಭಕ್ತಿ ಮತ್ತು ಕೃತಜ್ಞತೆಯ ಭಾವನೆಯನ್ನು ತುಂಬಲು ಶಾಲೆಗಳು ಈ ದಿನವನ್ನು ಆಚರಿಸುತ್ತವೆ. ಇದು ವಿದ್ಯಾರ್ಥಿಗಳು ತಮ್ಮ ದೇಶವನ್ನು ಮೆಚ್ಚುವಂತೆ ಮತ್ತು ಏಕತೆ ಮತ್ತು ಸಾಮರಸ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಈ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ವೀರಯೋಧರ ಸವಿನೆನಪಿಗಾಗಿ ಆಚರಿಸಲಾಗುತ್ತಿರುವ 26ನೇ ಕಾರ್ಗಿಲ್ ವಿಜಯೋತ್ಸವ ಹುತಾತ್ಮ ಯೋಧರ, ವೀರನಾರಿಯರ ಕುಟುಂಬಕ್ಕೆ ಬೆಂಬಲವಾಗಿರಲಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ರೂಪಿಸಿ ಆಚರಿಸಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಡಾ. ಸಿ.ಎ.ಹಿರೇಮಠ ಸೇರಿ ಮಾಜಿ ಯೋಧರು, ಹುತಾತ್ಮ ಯೋಧರ ಕುಟುಂಬದ ಸದಸ್ಯರು, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.