ಭೂಮಾಫಿಯಾ ತನಿಖೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

karave protest
Published on

ಶಿವಮೊಗ್ಗ: ನಗರದಲ್ಲಿ ಭೂಮಾಫಿಯಾ ಹೆಚ್ಚಿದ್ದು, ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದಲ್ಲಿ ಭೂ ಮಾಫಿಯಾ ಹೆಚ್ಚುತ್ತಿದ್ದು, ನಾಗರಿಕರಲ್ಲಿ ಆತಂಕ ಹುಟ್ಟುಹಾಕಿದೆ. ದುರ್ಬಲ ವರ್ಗದವರ ಮಹಾನಗರ ಪಾಲಿಕೆಯ ಮೀಸಲು ಭೂಮಿ, ಗ್ರಾಮ ಠಾಣಾ, ಕೆರೆ, ಸ್ಮಶಾನ ಹೀಗೆ ಎಲ್ಲಿ ಬೇಕಲ್ಲಿ ಭೂಕಬಳಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸರ್ಕಾರಿ ಭೂಪ್ರದೇಶಗಳು ಭೂಮಿ ಕಳ್ಳರಿಗೆ ಸುಲಭವಾಗಿ ಬಿಟ್ಟಿದೆ. ಇಂತಹದೊಂದು ಬಹುದೊಡ್ಡ ಜಾಲ ಶಿವಮೊಗ್ಗದಲ್ಲಿ ಬೆಳೆಯುತ್ತಿದ್ದು, ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಇದಕ್ಕಾಗಿ ಟಾಸ್ಕ್‌ಫೋರ್ಸ್ ರಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಗರದ ಸುತ್ತಮುತ್ತ ಪ್ರದೇಶದ ಆಲ್ಕೋಳ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಗೆಜ್ಜೇನಹಳ್ಳಿ, ನವುಲೆ, ರಾಗಿಗುಡ್ಡ, ಹಸೂಡಿ, ಬೊಮ್ಮನಕಟ್ಟೆ, ಸವಳಂಗ ರಸ್ತೆ ಸುತ್ತಮುತ್ತ ಭೂಗಳ್ಳರು ಆಕ್ರಮಿಸತೊಡಗಿದ್ದಾರೆ. ಸರ್ವೆ ಅಧಿಕಾರಿಗಳು ಕೂಡ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮೇಲೂ ಕಣ್ಣಿಟ್ಟಿದ್ದಾರೆ. ಲ್ಯಾಂಡ್ ಡೆವಲಪಸ್ ಎನ್ನುವ ನಕಲಿಗಳಿಗೆ ಮೀಸಲು ಭೂಮಿಗಳನ್ನು ಲಂಚದ ಆಮಿಷವೊಡ್ಡಿ ಡಿನೋಟೀಫೈ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ವೇದಿಕೆ ರಾಜ್ಯಾಧ್ಯಕ್ಷ ಪಿ.ಕೃಷ್ಟೇಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಪ್ರಮುಖರಾದ ಕವಿತಾ, ಜಯಕೃಷ್ಣ, ಮಹಮ್ಮದ್ ಶಫಿ, ಅಶ್ವತ್, ಕೇಶವ, ಜ್ಯೋತಿ, ಗಣೇಶ್, ಮಾಲತಿ, ನಾಗರಾಜ್, ಅನುಪಮಾ ರೋಜಲಿನ್, ಡಾ. ವೀಣಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net