ಆತ್ಮರಕ್ಷಣೆಗೆ ಕರಾಟೆ ಕಲೆ ಸಹಕಾರಿ

sgr karate
ಸಾಗರದ ಕರಾಟೆ ಇನ್‌ಸ್ಟಿಟ್ಯೂಟ್‌ನಿಂದ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಾಲತೇಶ್, ತೀ.ನ.ಶ್ರೀನಿವಾಸ್, ರಾಘವೇಂದ್ರ, ಶಿವಕುಮಾರ್ ಇತರರಿದ್ದರು.
Published on

ಸಾಗರ: ಆತ್ಮರಕ್ಷಣೆಗೆ ಅಗತ್ಯವಾದ ಕರಾಟೆ ಕಲೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಓದಿನ ಜತೆಗೆ ಸಾಹಸ ಕ್ರೀಡೆ ಸಹ ದೈಹಿಕ ಸದೃಢತೆ ಹೊಂದಲು ಸಹಕಾರಿಯಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್ ಹೇಳಿದರು.

ಪಟ್ಟಣದ ಸಾಗರ ಕರಾಟೆ ಇನ್‌ಸ್ಟಿಟ್ಯೂಟ್‌ನಿಂದ ಭಾನುವಾರ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಪಾಲಕರು ಕಡಿವಾಣ ಹಾಕಬಾರದು. ಅವರ ಆಸಕ್ತಿದಾಯಕ ಕ್ಷೇತ್ರ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಯಾವ ಮಗು ಭವಿಷ್ಯದಲ್ಲಿ ಎಂತಹ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ತಲುಪುತ್ತದೆ ಎಂದು ಹೇಳಲು ಆಗುವುದಿಲ್ಲ. ಮಹಿಳೆಯರು, ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ತಪ್ಪಿಸಲು ಕರಾಟೆಯಂತಹ ಕ್ರೀಡೆ ಕರಗತ ಮಾಡಿಕೊಳ್ಳುವ ಅಗತ್ಯವಿದೆ. ಕಳೆದ 25 ವರ್ಷಗಳಿಂದ ಸಾಗರ ಕರಾಟೆ ಸಂಸ್ಥೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ ಎಂದರು.

ಸಾಗರ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆ ಸಮಯಪಾಲನೆ, ಶಿಸ್ತು ರೂಢಿಸಿಕೊಳ್ಳಲು ಕರಾಟೆ ಸಹಕಾರಿ. ದೈನಂದಿನ ಜೀವನ, ಶಾಲಾ ವಾತಾವರಣದಲ್ಲಿ ಮಕ್ಕಳು ಶಿಸ್ತು ಪಾಲಿಸಿಕೊಂಡು ಹೋಗಲು ಇಂತಹ ಕ್ರೀಡೆ ಮಾರ್ಗದರ್ಶನ ಮಾಡುತ್ತದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಶಿಯಾನ್ ಪಂಚಪ್ಪ ಮಾತನಾಡಿ, ಕರಾಟೆ ಆತ್ಮರಕ್ಷಣೆ ಸಹಕಾರಿಯಷ್ಟೇ ಅಲ್ಲ, ಬದುಕಿನಲ್ಲಿ ಶಿಸ್ತನ್ನು ಸಹ ರೂಢಿಸಿಕೊಳ್ಳಲು ನೆರವಾಗುತ್ತದೆ. ಮಕ್ಕಳು ಕರಾಟೆ ಕಲಿತರೆ ದಿನಪೂರ್ತಿ ಕ್ರಿಯಾಶೀಲರಾಗಿರುತ್ತಾರೆ. ಅವರಲ್ಲಿ ಜಡತ್ವ ದೂರವಾಗುತ್ತದೆ ಎಂದರು.

ರಾಘವೇಂದ್ರ, ಶಿವಕುಮಾರ್, ರಾಜೇಶ್, ಸೌಮ್ಯಾ, ಉಮಾ, ರಫೀಕ್ ಬ್ಯಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net