ಕರಾಟೆಗೆ ಸ್ಪರ್ಧೆಗೆ ಅಧಿಕೃತ ತೀರ್ಪುಗಾರರನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ

6-RNR-04.
Published on

ರಾಣೆಬೆನ್ನೂರ: ಹಾವೇರಿಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಅನಧಿಕೃತ ಕರಾಟೆ ತರಬೇತುದಾರರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಿಕೊಂಡು ಕರಾಟೆ ಪಟುಗಳಿಗೆ ಮೋಸ ಮಾಡಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಆಯೋಜಿಸಿದ್ದು, ಅಧಿಕಾರಿಗಳು ಕೂಡಲೇ ಇದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಸಂಸ್ಥೆ ಅಧ್ಯಕ್ಷ ನಾರಾಯಣ ಪೂಜಾರ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಹಾವೇರಿಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಈ ಬಗ್ಗೆ ಯಾರಿಗೂ ಮಾಹಿತಿ ನೀಡದೆ ತಮಗೆ ಬೇಕಾದ ಅನಧಿಕೃತ ತೀರ್ಪುಗಾರರನ್ನು ನೇಮಕ ಮಾಡಿಕೊಂಡು ಅವರಿಗೆ ಬೇಕಾದ ಕರಾಟೆ ಪಟುಗಳನ್ನು ಸ್ಪರ್ಧೆಯಲ್ಲಿ ಭಾಗಹಿಸುವಂತೆ ಮಾಡುತ್ತಿದ್ದಾರೆ.
ಇದರಿಂದಾಗಿ ಸ್ಪರ್ಧೆಯಲ್ಲಿ ಪಾರದರ್ಶಕತೆ ಇಲ್ಲದಂತಾಗುತ್ತಿದೆ. ಅಲ್ಲದೆ ಜಿಲ್ಲೆಯ ನಿಜವಾದ ಕರಾಟೆ ಪಟುಗಳು ಸ್ಪರ್ಧೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪ್ರತಿವರ್ಷ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆದ ಕರಾಟೆ ಪಟುಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲನೇ ಆಟದಲ್ಲಿಯೆ ಸೋತು ಮನೆಗೆ ಬರುವಂತಾಗಿದೆ.
ಕರಾಟೆ ಸ್ಪರ್ಧೆಯಲ್ಲಿ ಎಕೆಎಸ್‌ಕೆಎನಿಂದ ಪ್ರಮಾಣಪತ್ರ ಪಡೆದ ತರಬೇತುದಾರರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ಇಲಾಖೆ ಅಧಿಕಾರಿಗಳು ನಿಯಮ ಗಾಳಿಗೆ ತೂರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸ್ಪರ್ಧೆಯನ್ನು ಮುಂದೂಡಿ ಅಧಿಕೃತ ತೀರ್ಪುಗಾರರನ್ನು ನೇಮಕ ಮಾಡಿಕೊಂಡು ಸ್ಪರ್ಧೆ ನಡೆಸಬೇಕು. ಇಲ್ಲವಾದರೆ ಅ. 7ರಂದು ಹಾವೇರಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಕರಾಟೆ ಕ್ರೀಡಾಕೂಟ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ರಾಘವೇಂದ್ರ ಬಾರ್ಕಿ, ದಿಳ್ಳೆಪ್ಪ ಅಂಬಿಗೇರ, ನಾಗರಾಜ ಸುಣಗಾರ, ಪವನ ಶಿಡೇನೂರ, ಮನಿಷಾ ಕಬ್ಬೂರ, ಪವನಕುಮಾರ ವಿ.ಜೆ. ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net