

ಉಡುಪಿ: ಮನುಜರನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಸಲು ಸಮಾಜವನ್ನು ಸುಸ್ಥಿತಿಯಲ್ಲಿಡಲು ಧರ್ಮ ಅತ್ಯಗತ್ಯ. ಈ ನಿಟ್ಟಿನಲ್ಲಿ ದೇಶದಲ್ಲಿ ಸಾಧು, ಸಂತರಿಂದ ಸಂಸ್ಕಾರಯುತ ರಾಷ್ಟ್ರ, ಸಮಾಜ ನಿರ್ಮಿಸಲು ನಿರಂತರ ಮಾರ್ಗದರ್ಶನ ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ಜರುಗಿದ ಕರಂಬಳ್ಳಿ ಶ್ರೀ ವೆಂಕಟರಮಣ ದೇವಳದ ಬ್ರಹ್ಮಕಲಶೋತ್ಸವ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ದೇಶದ ಆಚಾರ, ವಿಚಾರ ಜಗತ್ತಿನಲ್ಲಿ ಯಾವುದೇ ರಾಷ್ಟ್ರಕ್ಕೆ ಸಾಟಿ ಇಲ್ಲ, ಇದೆಲ್ಲವೂ ನಮ್ಮ ಸಂತರ ಕೊಡುಗೆ ಎಂದು ಬಣ್ಣಿಸಿದರು. ಸಂತರ ಮಾರ್ಗದರ್ಶನಲ್ಲಿ ನಾವೆಲ್ಲರೂ ಮುಂದೆ ಸಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಪ್ರಮುಖ ಸ್ಥಾನ ಪಡೆದಿದ್ದು, ಈ ಹಿಂದೆ ದೇವಾಲಯದ ಜೀರ್ಣೋದ್ಧಾರಕ್ಕೆ ಅಂದಿನ ಸಚಿವ ದಿ.ವಿ.ಎಸ್. ಆಚಾರ್ಯ ಹೆಚ್ಚಿನ ಆಸಕ್ತಿ ವಹಿಸಿದ್ದರು. ಜತೆಗೆ ಶಾಸಕ ಕೆ.ರಘುಪತಿ ಭಟ್ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಇದೀಗ ದೇವಳ ಇನ್ನಷ್ಟು ನವೀಕರಣಗೊಂಡು ಭಕ್ತರಿಗೆ ಸಕಲ ಸೌಕರ್ಯ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ದೇವಳದ ಆಡಳಿತ ಮೊಕ್ತೇಸರ ಹಾಗೂ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಜೀವರಾಜ್, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ್ ಶೆಟ್ಟಿ, ಕಾರ್ಯಾಧ್ಯಕ್ಷ ರಂಜನ್, ದೇವಳದ ತಂತ್ರಿ ಪಾಡಿಗಾರು ವಾಸುದೇವ ತಂತ್ರಿ, ದೇವಳದ ಪ್ರಧಾನ ಅರ್ಚಕ ದಿವಾಕರ್ ಐತಾಳ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ ಮತ್ತಿತರರಿದ್ದರು.
ದೇವಳಕ್ಕೆ 4 ಕೋಟಿ ರೂ. ಅನುದಾನ
ಈಗಾಗಲೇ ದೇವಳ ನವೀಕರಣ ಕಾರ್ಯಕ್ಕೆ ಮುಜುರಾಯಿ ಇಲಾಖೆಯಿಂದ 25 ಲಕ್ಷ ರೂ, ಅನುದಾನ ನೀಡಲಾಗಿದೆ. ದೇವಳದ ಅನ್ನಛತ್ರ ನಿರ್ಮಿಸಿ ವ್ಯವಸ್ಥಿತ ರೀತಿಯಲ್ಲಿ ಅನ್ನ ದಾಸೋಹ ನಿರ್ಮಿಸಲು ಸರ್ಕಾರದ ವತಿಯಿಂದ ಒಂದು ವಾರದೊಳಗೆ 4 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.