21ರಂದು ಕಪ್ಪಡಿ ಜಾತ್ರೆ ಆರಂಭ

18 K.R.NAGAR-5
Published on

ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ತಾಲೂಕಿನ ಶ್ರೀ ಕ್ಷೇತ್ರವಾದ ಕಪ್ಪಡಿ ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿಯವರ ಜಾತ್ರೆ ಫೆ.21ರಿಂದ ಮಾ.20ರವರೆಗೆ 29 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಪ್ರತಿವರ್ಷ ಮಹಾ ಶಿವರಾತ್ರಿಯಿಂದ ಆರಂಭವಾಗುವ ಕಪ್ಪಡಿ ಜಾತ್ರೆಗೆ ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಜತೆಗೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬಂದು ದೈವಶಕ್ತ ಮತ್ತು ಸಿದ್ದ ಪುರುಷರ ಗದ್ದುಗೆಯ ದರ್ಶನ ಪಡೆಯುತ್ತಾರೆ.
ಶ್ರೀಕ್ಷೇತ್ರದಲ್ಲಿ ಯಾವುದೇ ಮೂರ್ತಿ ಮತ್ತು ವಿಗ್ರಹಗಳು ಇಲ್ಲ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆ ಪೂಜೆಯ ಕೇಂದ್ರ ಬಿಂದುವಾಗಿದೆ. ಇದರ ಜತೆಗೆ ಸಿದ್ದಪ್ಪಾಜಿ ಮತ್ತು ಚನ್ನಾಜಮ್ಮನವರ ಗದ್ದುಗೆಗಳು ಕ್ಷೇತ್ರದ ಶಕ್ತಿ ಕೇಂದ್ರಗಳಾಗಿವೆ. ಕ್ಷೇತ್ರಕ್ಕೆ ಬಂದು ಪೂಜೆ ನೆರವೇರಿಸಿ, ಹರಸಿಕೊಂಡರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರಾಣಿ ಬಲಿ ನೀಡಿ, ಹರಕೆ ಸಲ್ಲಿಕೆ: ಪ್ರತಿ ವರ್ಷ ಶಿವರಾತ್ರಿಯಿಂದ ಯುಗಾದಿಯವರೆಗೆ ನಡೆಯುವ ಈ ಜಾತ್ರೆಯಲ್ಲಿ ಭಕ್ತರು ದೇವಸ್ಥಾನ ಬಿಟ್ಟು ಹೊರವಲಯದಲ್ಲಿ ಪ್ರಾಣಿ ಬಲಿ ನೀಡುವರು. ಬಳಿಕ ಪೂಜೆ ಸಲ್ಲಿಸಿ ಹರಕೆ ತೀರಿಸಿ ಭೋಜನ ಸ್ವೀಕರಿಸುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ.


2016 ಮತ್ತು 2018ರ ಜಾತ್ರೆಗಳು ಅತ್ಯಂತ ಯಶಸ್ವಿಯಾಗಿದ್ದವು. ಆ ಸಾಲಿನಲ್ಲಿ ನಾವು ಪರಿಚಯಿಸಿದಂತಹ ಹಲವಾರು ಹೊಸ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಅದರಂತೆ ಜಾತ್ರೆಯಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಹಕಾರ ಪಡೆಯಲಾಗಿದೆ.
ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್, ಮಠಾಧಿಪತಿ, ಮಳವಳ್ಳಿ ಮಂಟೇಸ್ವಾಮಿ ಮಠ.

ಕಪ್ಪಡಿ ಶ್ರೀಕ್ಷೇತ್ರ ಐತಿಹಾಸಿಕ ಸ್ಥಳವಾಗಿದ್ದು, ಈ ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ಬಂದು ದೇವರನ್ನು ಪೂಜಿಸಿ ತಮ್ಮ ಹರಕೆಗಳನ್ನು ತೀರಿಸಿಕೊಂಡು ತಳಿಗೆ ಮಾಡಿ ಸಂಭ್ರಮಿಸುತ್ತಾರೆ. ವಾಹನಗಳ ನಿಲುಗಡೆಗೆ ಸ್ಥಳ ಅಭಾವವಿದ್ದು, ಸಂಬಂಧಪಟ್ಟವರು ಇದರ ಬಗ್ಗೆ ಹೆಚ್ಚಿನ ಕ್ರಮ ವಹಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವ ಜತೆಗೆ ಪ್ರಾಣಿ ಬಲಿ ಹೆಸರಿನಲ್ಲಿ ಭಕ್ತರಿಗೆ ಪೊಲೀಸರು ನೀಡುವ ಕಿರುಕುಳ ತಪ್ಪಿಸಲಿ.
ಎಚ್.ಎಂ.ಮಂಜು, ಗ್ರಾಪಂ ಸದಸ್ಯ, ಹೆಬ್ಬಾಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net