

ನವದೆಹಲಿ: ಜುಲೈ 25ರಿಂದ ನಡೆಯಬೇಕಿದ್ದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿ ನವದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾತ್ರೆಯನ್ನು ರದ್ದು ಮಾಡಿರುವುದಾಗಿ ತಿಳಿಸಲಾಗಿದೆ.
ಯಾತ್ರೆಗೆ ಸಂಬಂಧಿಸಿದ ಯಾವುದೇ ಆಚರಣೆಗಳು, ಮೆರವಣಿಗೆಗಳು ಅಥವಾ ಕೂಟಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಅಧಿಕೃತ ಆದೇಶ ಭಾನುವಾರ ತಿಳಿಸಿದೆ. ಯಾತ್ರೆಯಿಂದಾಗಿ ಜನಸಂದಣಿ ಉಂಟಾಗುವ ಸಾಧ್ಯತೆ ಇದ್ದು, ಅದರಿಂದಾಗಿ ಕರೊನಾ ಹೆಚ್ಚಾಗುವ ಅಪಾಯವಿದೆ. ಆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶ ತಿಳಿಸಿದೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಬಗ್ಗೆ ತಜ್ಞರು ವ್ಯಕ್ತಪಡಿಸಿದ ಆತಂಕ ಮತ್ತು ಕೂಟಗಳಿಂದ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದಾಗಿ ಉತ್ತರಾಖಂಡ ರಾಜ್ಯ ಸರ್ಕಾರವು ಕನ್ವರ್ ಯಾತ್ರೆಯನ್ನು ರದ್ದು ಮಾಡಿತ್ತು. ಅದರ ಬೆನ್ನಲ್ಲೇ ಶನಿವಾರದಂದು ಉತ್ತರ ಪ್ರದೇಶ ಕೂಡ ಯಾತ್ರೆ ರದ್ದು ಮಾಡಿ ಆದೇಶ ಹೊರಡಿಸಿತ್ತು.
ಶ್ರಾವಣ ತಿಂಗಳ ಆರಂಭದಲ್ಲಿ ಅಂದರೆ ಸಾಮಾನ್ಯವಾಗಿ ಜುಲೈ ತಿಂಗಳ ಅಂತ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗುತ್ತದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಂತರ ಶಿವ ಭಕ್ತರು ನಡೆದುಕೊಂಡು ಹರಿದ್ವಾರಕ್ಕೆ ಬಂದು ಸೇರುತ್ತಾರೆ. ಅಲ್ಲಿನ ಗಂಗಾ ನದಿಯ ನೀರನ್ನು ತೆಗೆದುಕೊಂಡು ತಮ್ಮ ಶಿವ ದೇವಾಲಯಕ್ಕೆ ಅರ್ಪಿಸುತ್ತಾರೆ. (ಏಜೆನ್ಸೀಸ್)