ಸಮಷ್ಟಿ ತಂಡದಿಂದ 4ರಂದು ‘ಕಂತು’ ನಾಟಕ ಪ್ರದರ್ಶನ

samasti
ಸಮಸ್ಟಿ ರಂಗ ತಂಡದ ಕಂತು ನಾಟಕ ಪ್ರದರ್ಶನದ ಒಂದು ಸಂದರ್ಭ.
Published on

ಬೆಂಗಳೂರು: ಸಮಷ್ಟಿ ಕನ್ನಡ ರಂಗತಂಡವು ಫೆಬ್ರವರಿ 4ರಂದು ‘ಕಂತು’ ನಾಟಕ ಪ್ರದರ್ಶಿಸಲಿದೆ. ಈ ನಾಟಕವು ಖ್ಯಾತ ಸಾಹಿತಿ ವಿವೇಕ ಶಾನಭಾಗರ ‘ಕಂತು’ ಕತೆಯನ್ನ ಆಧರಿಸಿದ್ದು, ಮಂಜುನಾಥ. ಎಲ್. ಬಡಿಗೇರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸಿದ್ಧಗೊಂಡಿದ್ದು ರಂಗಶಂಕರದಲ್ಲಿ ಸಂಜೆ 7.30 ಕ್ಕೆ ಪ್ರದರ್ಶನ ಕಾಣಲಿದೆ.

ಪ್ರಕೃತಿ ಸಹಜ ಘಟನೆಗಳಲ್ಲಿ ಗ್ರಹಣವೂ ಒಂದು. ಮಾವಿನೂರಿನಲ್ಲಿ ನಡೆಯಲಿರುವ ಗ್ರಹಣದ ಹಿನ್ನೆಲೆಯಲ್ಲಿ ನಡೆಯುವ ಘಟನೆಗಳೇ ಈ ಕಂತು ನಾಟಕದ ಸಾರವಾಗಿದೆ.

ದುಡ್ಡು ಸಿಗುವುದಾದರೆ ತಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಮನೆ-ಮಠಗಳನ್ನು ಮಾರಿಬಿಡಲು ಮಾವಿನೂರಿನ ಜನರು ಸಿದ್ಧರಾಗುವುದು, ಅವರ ಮನಸ್ಸಿಗೆ ಹಿಡಿದಿರುವ ಗ್ರಹಣವಾದರೆ, ಜಗನ್ನಾಥನ ಶ್ರೀಮಂತಿಕೆ ಮತ್ತು ಅಧಿಕಾರ ಊರಿನ ಬಡ ಜನರ ಜೀವನದ ಮೇಲೆ ಕವಿದ ಗ್ರಹಣವಾಗಿದೆ. ಇದರ ಜತೆಗೆ ಅಣೆಕಟ್ಟು ಕಟ್ಟಿ ಇಡೀ ಊರೇ ಮುಳುಗುವ ಪರಿಸ್ಥಿತಿಯು, ಊರಿಗೇ ಹಿಡಿದ ಗ್ರಹಣವಾಗಿದೆ. ಎಲ್ಲರನ್ನ ಕಂತಿಸಬಲ್ಲ ಮತ್ತು ಎಲ್ಲವನ್ನ ಕಂತಿಸಬಲ್ಲ ಈ ಪರಿಯ ಗ್ರಹಣವೇ ಈ ನಾಟಕ ಎಂದ ಸಮಷ್ಟಿ ರಂಗ ತಂಡ ಹೇಳಿಕೊಂಡಿದೆ.

90ರ ದಶಕದ ಕಾಲ ಘಟ್ಟದಲ್ಲಿ ನಡೆಯುವ ಈ ನಾಟಕ, ಪ್ರಕೃತಿಯ ಸಹಜ ಕ್ರಿಯೆಗಳ ಜತೆಗೆ ಮನುಷ್ಯರ ಬದುಕಿನ ಸಂಕೀರ್ಣತೆ ಮತ್ತು ದ್ವಂದ್ವಗಳನ್ನು, ನವಿರಾದ ಹಾಸ್ಯದೊಂದಿಗೆ ತೆರೆದಿಡುವ ಪ್ರಯತ್ನ ಮಾಡುತ್ತದೆ. ಈ ನಾಟಕವು ಉಡುಪಿ ರಂಗಭೂಮಿ ಸಂಸ್ಥೆ ಆಯೋಜಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದೆ.

ಸಮಷ್ಟಿ ತಂಡವು 2000 ದಲ್ಲಿ ಹುಟ್ಟಿಕೊಂಡ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ ಹೊಂದಿದೆ. ಈವರೆಗೆ ಇದು ಆಷಾಡದ ಒಂದು ದಿನ, ಸಾಂಬಶಿವ ಪ್ರಹಸನ, ಮೃಚ್ಛಕಟಿಕ, ಹದ್ದು ಮೀರಿದ ಹಾದಿ, ಅಲೆಗಳಲ್ಲಿ ರಾಜಹಂಸಗಳು, ಹರಿಣಾಭಿಸರಣ, ಕಥನ, ಮಿಸ್. ಸದಾರಮೆ ಕಥೆ ಹೇಳತೀವಿ ಸಾಫಲ್ಯ, ಅವಾಂತರ, ಶಾಂಡಿಲ್ಯ ಪ್ರಹಸನ ನಾಯೀಕತೆ, ಪ್ರಮೀಳಾರ್ಜುನೀಯಂ, ಚಿರಕುಮಾರ ಸಭಾ, ವಿಶಾಕೇ, ಚಿತ್ರಪಟ ನೀರು ಕುಡಿಸಿದ ನೀರೆಯರು, ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಕಂತು ಕುರಿತು ಮಾಹಿತಿಗೆ 9845163380ನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net