ಕೆ.ಎಸ್.ಈಶ್ವರಪ್ಪ ಪುತ್ರನ ವಿರುದ್ಧ ಪ್ರತಿಭಟನೆ

protest
Published on

ಶಿವಮೊಗ್ಗ: ನಗರದ ಪುರಲೆ ಸರ್ಕಾರಿ ಶಾಲೆ ಆವರಣದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಎರಡು ಕೊಠಡಿಗಳನ್ನು ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಉದ್ಘಾಟಿಸಿರುವುದರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಇದಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನಗರ ಪಾಲಿಕೆ ಪ್ರತಿಪಕ್ಷ ಸದಸ್ಯರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರದ ಅನುದಾನದಿಂದ ನಿರ್ಮಾಣವಾಗಿರುವ ಈ ಕೊಠಡಿಗಳನ್ನು ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದ್ದರೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಯಾವುದೇ ಅಧಿಕಾರವಿಲ್ಲದ ಕೆ.ಇ.ಕಾಂತೇಶ್ ಉದ್ಘಾಟನೆ ಮಾಡಿರುವುದು ವಿಪರ್ಯಾಸ. ಕಡೇ ಪಕ್ಷ ಆ ಭಾಗದ ಪಾಲಿಕೆ ಸದಸ್ಯರು, ಇಲ್ಲವೇ ಎಸ್‌ಡಿಎಂಸಿ ಅಧ್ಯಕ್ಷರಾದರೂ ಕೊಠಡಿ ಉದ್ಘಾಟಿಸಬಹುದಿತ್ತು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವತಃ ಬಿಇಒ ನಾಗರಾಜ್ ಭಾಗವಹಿಸಿದ್ದರು. ಶಿಷ್ಟಾಚಾರದ ಬಗ್ಗೆ ಅವರಾದರೂ ಕೆ.ಇ.ಕಾಂತೇಶ್ ಅವರ ಗಮನಸೆಳೆದು ಉದ್ಘಾಟನೆ ನಡೆಸದಂತೆ ತಿಳಿಸಬಹುದಿತ್ತು. ಇದರಲ್ಲಿ ಬಿಇಒ ಅವರ ಕರ್ತವ್ಯಲೋಪ ಕಾಣುತ್ತಿದೆ. ಇಲ್ಲವೇ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸಲು ಸ್ವತಃ ಬಿಇಒ ಅವರೇ ಉದ್ಘಾಟನೆಗೆ ಅವಕಾಶ ನೀಡಿರುವ ಸಾಧ್ಯತೆಗಳಿವೆ ಎಂದು ದೂರಿದರು.

ನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ಕಾಂಗ್ರೆಸ್ ಮುಖಂಡರಾದ ಕೆ.ರಂಗನಾಥ್, ರಂಗೇಗೌಡ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net