

ಶಿವಮೊಗ್ಗ: ಲೋಕಸಭಾ ಚುನಾವಣೆ ಎದುರಿಸುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಕಾಂತರಾಜ ಆಯೋಗದ ವರದಿ ಜಾರಿ ಸಂಬಂಧ ತಮ್ಮ ನಿಲುವು ಘೋಷಿಸಬೇಕು. ಆನಂತರ ಹಿಂದುಳಿದ ಜಾತಿ-ವರ್ಗಗಳ ಮತ ಯಾರಿಗೆ ಎಂಬುದನ್ನು ನಿಧಧರಿಸಲಾಗುವುದು ಎಂದು ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು.
ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ವೇದಿಕೆಯ ಕಾರ್ಯಕಾರಿ ಮಂಡಳಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂತರಾಜ ಆಯೋಗದ ವರದಿ ವಿರೋಧಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಸೀದಾ ಮನೆಗೆ ಕಳಿಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಸಂಚಾಲಕ ಬಿ.ಜನಮೇಜಿರಾವ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ಮತದಾರರು ಆದಿಕಾಲದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವೃತ್ತಿಯ ಎಲ್ಲ ವಿದ್ಯೆಗಳನ್ನೂ ಬಲ್ಲವರಾಗಿದ್ದು ಹಿಂದುಳಿದ ಸಮುದಾಯಗಳ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೌರವ ಅಧ್ಯಕ್ಷ ಪ್ರೊ. ಎಚ್.ರಾಚಪ್ಪ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ವೇದಿಕೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರ ವಿತರಣೆ, ಕಾಂತರಾಜ ಆಯೋಗದ ವರದಿ ಪರಿಚಯ, ವರದಿಯ ಉಪಯೋಗಗಳು ಇತ್ಯಾದಿ ಕುರಿತು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಎ.ಡಿ.ಶಿವಪ್ಪ, ಡಿ.ವಿ.ರಘುನಾಥ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆಯಿಂದ ಹೊರತರಲಾಗಿರುವ ನಾಲ್ಕನೆ ಕರಪತ್ರ ಬಿಡುಗಡೆ ಸಾಂಕೇತಿಕವಾಗಿ ಮಾಡಲಾಯಿತು. ವೇದಿಕೆ ಉಪಾಧ್ಯಕ್ಷರಾದ ಪ್ರೊ. ಜಿ.ಪರಮೇಶ್ವರಪ್ಪ, ಪ್ರೊ. ಎಸ್.ವಿ.ಪ್ರಭಾಕರ್, ಚನ್ನವೀರಪ್ಪ ಗಾಮನಗಟ್ಟಿ, ಜಿ.ವಿ.ಪಾಂಡುರಂಗಪ್ಪ, ಸಂಚಾಲಕ ಆರ್.ಟಿ.ನಟರಾಜ್ ಉಪಸ್ಥಿತರಿದ್ದರು.